ರೋಮನ್ ಸಾಹಿತ್ಯ ವಿಮರ್ಶೆ
 
ಪ್ರಾಚೀನ ರೋಮನರಲ್ಲಿ ಸಾಹಿತ್ಯ ವಿಮರ್ಶೆ ಎಂದು ಯಾರಿಂದ ಪ್ರಾರಂಭವಾಯ್ತು ಎಂಬ ಪ್ರಶ್ನೆಗೆ ಒಮ್ಮತದ ಉತ್ತರವಿಲ್ಲ. ಸಿಸಿರೊ ವಿಮರ್ಶೆಯ ಸ್ಥಾಪಕ; ಹೊರೇಸ್ ಬರುವತನಕ ವಿಮರ್ಶೆಯೆಂಬುದು ಇರಲಿಲ್ಲ; ಸಾಹಿತ್ಯಕ್ಕೆ ಅನಿವಾರ್ಯ ಪೂರ್ವಸಿದ್ಧತೆ ಯಾಗಿಯೇ ವಿಮರ್ಶೆ ತಲೆದೋರಿತು ಮೊದಲಾದ ಅಭಿಪ್ರಾಯಗಳು ಪಂಡಿತರಿಂದ ಪ್ರಕಟಗೊಂಡಿವೆ. ರೋಮನ್ ಸಂಸ್ಕøತಿಯ ಒಂದು ವಿಶಿಷ್ಟ ಲಕ್ಷಣವನ್ನು ಮುಂದಿರಿಸಿಕೊಂಡರೆ ಸಾಹಿತ್ಯ ಮತ್ತು ವಿಮರ್ಶೆಯ ವಿಚಾರದಲ್ಲಿ ಏಳಬಹುದಾದ ತೊಡಕುಗಳಲ್ಲಿ ಹಲವು ಬಿದ್ದುಹೋಗು ತ್ತವೆ. ಅರ್ಧ ನಾಗರಿಕತೆಯಿಂದ ಪೂರ್ತಿ ನಾಗರಿಕತೆಗೂ ಸಂಕುಚಿತ ದೇಶೀಯತೆಯಿಂದ ವಿಶಾಲ ಮಾನವತೆಗೂ ಅಪ್ರಬುದ್ಧ ಗೀತಕವನಗಳಿಂದ ಕಲಾತ್ಮಕ ಕಾವ್ಯರೂಪಕಗಳಿಗೂ ರೋಮ್ ತಿರುಗಿದ್ದು ಪ್ರಾಚೀನ ಗ್ರೀಸಿನ ಸಂಬಂಧದಿಂದ, ಪ್ರೇರಣೆಯಿಂದ, ನೇತೃತ್ವದಿಂದ. ಕ್ರಿಪೂ 3ನೆಯ ಶತಮಾನದಲ್ಲೆ ಇಟಲಿಯ ದಕ್ಷಿಣ ಭಾಗದಲ್ಲಿದ್ದ ಗ್ರೀಕ್ ಪ್ರಾಂತಗಳು ರೋಮಿನ ಮೇಲೆ ಪ್ರಭಾವ ಬೀರಿದುವು. ಲ್ಯಾಟಿನ್ನಿನ ಪ್ರಥಮ ಸಾಹಿತಿ ಲಿವಿಯಸ್ ಆಂಡ್ರಾನಿಕಸ್. ಆತ ಗ್ರೀಸಿನಿಂದ ಬಂದವ, ಗ್ರೀಕಿನ ಶ್ರೇಷ್ಠ ಕಾವ್ಯ ನಾಟಕಗಳನ್ನು ತೂಗಿ ನೋಡಿ ಅವುಗಳ ಅನುಕರಣವೇ ಕಲ್ಯಾಣದಾಯಕವೆಂದು ಮನಗಂಡವ. ಲ್ಯಾಟಿನ್ ವಿನೋದ ನಾಟಕಕಾರ ಪ್ಲಾಟಸ್ ಅದೇ ಅಭಿಮತದಿಂದ ಹುರುಪುಗೊಂಡು ರೂಪಕಗಳನ್ನು ರಚಿಸಿದ. ಗಣ್ಯ ಗ್ರೀಕ್ ವಿದ್ವಾಂಸರು ರೋಮಿಗೆ ಬಂದು ಉಪನ್ಯಾಸಗಳ ಮೂಲಕ ಗ್ರೀಕ್ ಭಾಷೆ ಸಾಹಿತ್ಯಗಳ ಬಗೆಗೆ ತೀವ್ರಾಸಕ್ತಿ ಹುಟ್ಟಿಸಿದರು. ಕ್ರಿಪೂ 165ರಲ್ಲಿ ಕ್ರೇಟೀಸ್ ಎಂಬುವ ವ್ಯಾಕರಣ ಭಾಷಾಶಾಸ್ತ್ರಗಳ ಪ್ರವಚನ ನಡೆಸಿ ಸಾಹಿತ್ಯದ ಅಧ್ಯಯನಕ್ಕೆ, ಮುಖ್ಯವಾಗಿ ಹೋಮರನ ಪಠನಕ್ಕೆ ಬೆಂಬಲವಿತ್ತ. ಕ್ರಿಪೂ 163ರಲ್ಲಿ 1000 ಮಂದಿ ಗ್ರೀಕರು ಒತ್ತೆಯಾಳುಗಳಾಗಿ ರೋಮ್‍ಗೆ ಕರೆತರಲ್ಪಟ್ಟರು. ಅವರಲ್ಲಿ ಪಾಲಿಬಿಯಸ್ ಒಬ್ಬ. ಆತ ರೋಮ್ ಅನ್ನು ತನ್ನ ಎರಡನೆಯ ತಾಯ್ನಾಡಾಗಿ ಒಪ್ಪಿಕೊಂಡ. ಕ್ರಿಪೂ 155ರಲ್ಲಿ ಅಥೆನ್ಸಿನ ನಿಯೋಗತಂಡದವರಾಗಿ ಕಾರ್ನಿಯಾಡಿಸ್ ಕ್ರೀಟೊಲಪಸ್ ಡಯೊಜಿನೀಸ್ ಆಗಮಿಸಿ ತತ್ತ್ವಶಾಸ್ತ್ರದ ವ್ಯಾಸಂಗಕ್ಕೆ ರೋಮನ್ ಕುಲೀನ ಶ್ರೀಮಂತರಿಗೆ ಕರೆಕೊಟ್ಟರು. ಕಾರ್ತೇಜನ್ನು ಕ್ರಿ.ಪೂ. 146ರಲ್ಲಿ ಗೆದ್ದ ಸಿಪಿಯೊ ಎಮಿಲಿಯೇನಸ್ ಸಾಹಿತ್ಯಪೋಷಕನಾಗಿ ತನ್ನ ಸುತ್ತ ಒಂದು ವಿದ್ವದ್ಗೋಷ್ಠಿ ಏರ್ಪಡಿಸಿ ಕೊಂಡ. ಪಾಲಿಬಿಯಸ್, ಪನೀಟಿಯಸ್ (ಇಬ್ಬರೂ ಗ್ರೀಕರು), ಲ್ಯೂಸಿಲಿಯಸ್, ಟೆರೆನ್ಸ್, ಲೀಲಿಯಸ್ ಆ ಗೋಷ್ಠಿಯ ಸದಸ್ಯರಾಗಿದ್ದರು.

ಆದರೆ ಗ್ರೀಕನ್ನು ಅವಲಂಬಿಸುವುದು ಕೆಲವು ಅಪ್ಪಟ ರೋಮನರಿಗೆ ಹಿಡಿಸಲಿಲ್ಲ. ಅವರಲ್ಲಿ ಹಿರಿಯ ಕೇಟೊ (ಕ್ರಿ.ಪೂ. 234-149) ಮುಖ್ಯಸ್ಥ. ಲ್ಯಾಟಿನ್ ಪರಾಧೀನವಾಗದೆ ಸ್ವಂತಿಕೆಯಿಂದ ಮೆರೆಯಬೇಕೆಂಬುದು ಅವನ ಶ್ರದ್ಧೆಯ ವಾದವಾಗಿತ್ತು. ಅವನು ಕಾವ್ಯವಿರೋಧಿಯೂ ಹೌದು. ಕವಿಗಳಿಗೆ ಅವನು ಕೊಟ್ಟ ಅಣಕನಾಮ ದಾರಿಗಳ್ಳರು. ಭಾಷಣವಿದ್ಯೆಗೆ ಒಂದು ಪ್ರವೇಶಿಕೆಯನ್ನು ಅವನು ಬರೆದಿದ್ದಾನೆ. ಅದು ಉಪಲಬ್ಧವಿಲ್ಲ. ಮಾತಿನಲ್ಲಿ ನಿಪುಣನಾದ ಸತ್ಪುರುಷನೇ ವಾಗ್ಮಿ; ಅಭಿಪ್ರಾಯಗಳನ್ನು ಸ್ಪಷ್ಟಮಾಡಿಕೊ, ಶಬ್ದಗಳು ತಾವಾಗಿ ಹಿಂಬಾಲಿಸುತ್ತವೆ-ಎಂಬ ಎರಡು ವಾಕ್ಯಗಳು ಪ್ರಸಿದ್ಧವಾಗಿದ್ದು ಇವು ಬಲುಬಳಕೆಯ ಸಾರೋಕ್ತಿಗಳಾಗಿವೆ.

ಗಣರಾಜ್ಯದ ಅವಧಿ: ಆಂಡ್ರಾನಿಕಸ್ ಮತ್ತು ನೀವಿಯಸ್ ಹಳೆಯ ಸ್ಯಾಟರ್ನಿಯನ್ ಛಂದಸ್ಸನ್ನೇ ಉಪಯೋಗಿಸಿದರು. ಎನ್ನಿಯಸ್ ಅದನ್ನು ಬಿಟ್ಟು, ಗ್ರೀಕರ ಷಡ್ಗಣ ಪಂಕ್ತಿಯನ್ನು ಲ್ಯಾಟಿನ್ನಿಗೆ ಹೊಂದಿಸಿಕೊಂಡ; ಅವನ ಪ್ರಭಾವ ಘನವಾಗಿದ್ದುದರಿಂದ ಮುಂದೆ ಬಂದ ಕವಿಗಳೆಲ್ಲರೂ ಗ್ರೀಕ್ ಛಂದೋವಿಧಾನಕ್ಕೆ ಮಾರುಹೋದರು. ಅಂಡ್ರಾನಿಕಸ್, ನೀವಿಯಸ್, ಎನ್ನಿಯಸ್ಸರ ಕೃತಿಗಳಲ್ಲಿ ಸಾಹಿತ್ಯವನ್ನು ಕುರಿತ ಟೀಕೆ ಅಪರೂಪವಾಗಿ ಬರುತ್ತದೆ. ಪ್ಲಾಟಸನ ಕಾಮೆಡಿಗಳಲ್ಲೂ ಪೀಠಿಕೆಗಳಲ್ಲೂ ಅವು ಅಧಿಕವಾಗಿದೆ. ಆದರೆ ಪ್ಲಾಟಸನ ಟೀಕೆಯೆಲ್ಲ ಪ್ರಾಸಂಗಿಕ, ಸೈದ್ಧಾಂತಿಕ ವಲ್ಲ. ಟೆರೆನ್ಸಿಗೆ ಸಿದ್ಧಾಂತದ ರೂಪರೇಷೆ ಇತ್ತೆಂದು ಚೆನ್ನಾಗಿ ತೋರಿಬರುತ್ತದೆ. ನಾಟಕದ ವಸ್ತುವಿನಲ್ಲೂ ರಚನೆಯಲ್ಲೂ ಕೊಂಚ ನಾವೀನ್ಯ ಬಂದರೆ ಲೇಸು; ಜನರ ಜೀವನದ ಪ್ರತಿಬಿಂಬ ಕನ್ನಡಿಯಲ್ಲೊ ಎಂಬಂತೆ ಬರತಕ್ಕದ್ದು; ಭಾವಾತಿರೇಕ ಕೂಡದು; ರೂಪಕ ಸಣ್ಣ ಪಂಥದವರು ಸಣ್ಣಗುಂಪಿಗಾಗಿ ತಯಾರಿಸಿದ್ದಾಗಬಾರದು-ಇಂಥ ಉತ್ತಮ ಹೇಳಿಕೆಗಳಿವೆ. ಟೆರೆನ್ಸಿಗೆ ಶತ್ರುಗಳಿದ್ದರು; ಅವನ ಮೇಲೆ ದೋಷಾರೋಪ ಎತ್ತಿದರು. ಎಲ್ಲಕ್ಕೂ ಸಮಾಧಾನಗಳನ್ನಿತ್ತು ಟೆರೆನ್ಸ್ ತೃಪ್ತಿಗೊಂಡ.

ಪಾಲಿಬಿಯಸನು ಇತಿಹಾಸ ಬರೆವಣಿಗೆ ಯಾವ ರೀತಿ ಇರಬೇಕೆಂಬು ದಕ್ಕೆ ಸೂತ್ರಗಳನ್ನು ಹೇಳಿದ್ದಾನೆ. ಗ್ರೀಕರ ಅಭಿಪ್ರಾಯ ಅವನಿಗೆ ಸರಿಯೆಂದು ತೋರಲಿಲ್ಲ. ಪ್ರದರ್ಶನಯೋಗ್ಯ ಭಾಷಣದ (ಎಪಿಡೈಕ್ಟಿಕ್ ರೆಟೈರಿಕ್) ಒಂದು ಬಗೆ ಚರಿತ್ರೆಯೆಂದು ಅವರ ಬಗೆದರು; ಚರಿತ್ರೆಯಲ್ಲಿ ಪ್ರಶಂಸೆ ನಿಂದೆಗಳನ್ನು ತಂದಿಟ್ಟು ಪಕ್ಷಪಾತಕ್ಕೆ ತುತ್ತಾದರು. ಪಾಲಿಬಿಯಸ್ಸಿಗಾದರೊ ಸತ್ಯ ಅತಿ ಮುಖ್ಯ ವಿಚಾರ. ಏನೇ ಆದರೂ ಅದಕ್ಕೆ ಧಕ್ಕೆ ಉಂಟಾಗಬಾರದು; ಜೀವಂತ ಪ್ರಾಣಿಯ ಕಣ್ಣನ್ನು ಕಿತ್ತರೆ ಅದು ಹೇಗೆ ನಿಶ್ಯಕ್ತವಾಗವುದೊ ಹಾಗೆ ಚರಿತ್ರೆಯಿಂದ ಸತ್ಯವನ್ನು ತೆಗೆದುಹಾಕಿದರೆ ಅದೊಂದು ಕೇವಲ ಕಟ್ಟುಕಥೆ. ಚಿತ್ರಕಾರನಿಗೆ ಅಗತ್ಯವಾದ ಮೂರು ಮುಖ್ಯಸಂಗತಿಗಳೆಂದರೆ ದಾಖಲೆಗಳ ಅಧ್ಯಯನ ಜ್ಞಾನ, ಕಾರಣಗಳ ಉದ್ದೇಶಗಳ ವಿವರಣಿ, ನಿರಾಡಂಬರ-ಎಂದು ಆತ ಸಾರಿದ.
ಲ್ಯೂಸಿಲಿಯಸ್ ಸೂಕ್ಷ್ಮ ವಿವೇಚನೆಯಿಂದ ಕೂಡಿದವ. ಶುದ್ಧ ಲ್ಯಾಟಿನ್ನಿನ ಭಕ್ತ. ಆಕ್ಸಿಯಸ್ “ಆ”ಕಾರ ಉಪಯೋಗಿಸುವುದರಲ್ಲಿ ತಪ್ಪುಮಾಡಿದ; ಪಾಕೂವಿಯಸ್, ಎನ್ನಿಯಸ್ಸರಲ್ಲಿ ಸಂಯುಕ್ತಪದದ ಹಾವಳಿ ಹೆಚ್ಚು; ಅಲ್‍ಬ್ಯೂಸಿಯಸ್ಸಿಗೆ ಎಲ್ಲದರಲ್ಲೂ ಗ್ರೀಕ್ ಆಗಿರಬೇಕೆಂಬ ಬಯಕೆ-ಮುಂತಾದ ಹೇಳಿಕೆಗಳು ಅವನ ಅಭಿಮತವನ್ನು ಪ್ರಕಟಿಸುತ್ತವೆ. ಪೊಯೆಮ್ ಎಂದರೆ ಸಣ್ಣ ಕವಿತೆ, ಪೊಯೆಸಿಸ್ ಎಂದರೆ ಉದ್ದಕಾವ್ಯ ಎಂಬ ವ್ಯತ್ಯಾಸವನ್ನು ಅವನ ಸೂಚಿಸಿದ. ಸ ಮತ್ತು ರ ಅಕ್ಷರಗಳ ಕಟು ದನಿಯನ್ನು ಬಯಲಿಗೆಳೆದ. ಶೈಲಿಯ ಕಡೆಗೆ ರೋಮನರ ಲಕ್ಷ್ಯ ಎಳೆದವನೂ ಅವನೇ.
ವಾಲ್ಕೇಸಿಯಸ್ ಸೆಡಿಜಿಟಸ್ ಕಾವ್ಯದ ಮೇಲೆ ಗ್ರಂಥ ಬರೆದ; ಅದರ ಒಂದ ಭಾಗ ಲಭ್ಯವಾಗಿದೆ. ಅದರಲ್ಲಿ ರೋಮನ್ ವಿನೋದನಾಟಕ ಕಾರರ ಸ್ಥಾನನಿರ್ಣಯವಿದೆ.
ಮಾರ್ಕಸ್ ವ್ಯಾರೊ (ಕಿ.ಪೂ. 116-27) ಅತ್ಯಂತ ಶ್ರೇಷ್ಠ ಪಂಡಿತ. ಸಿಸಿರೊವಿಗಿಂತ ಹತ್ತುವರ್ಷ ದೊಡ್ಡವ. ಅವನಿಗಿಂತ 15 ವರ್ಷ ಹೆಚ್ಚು ಬದುಕಿದ. ನಾನಾ ವಿಷಯಗಳ ಮೇಲೆ ಗ್ರಂಥ ರಚಿಸಿದ್ದಾನೆ. ಅವುಗಳಲ್ಲಿ ಲ್ಯಾಟಿನ್ ಭಾಷೆ ಮುಖ್ಯವಾದದ್ದು. ಅದರ 25 ಸಂಪುಟಗಳಲ್ಲಿ 6 ಮಾತ್ರ ಉಳಿದು ಬಂದಿವೆ. ಭಾಷೆಯ ಪರಿಶೀಲನೆಯಲ್ಲಿ ಸಮತಾವಾದಿಗ ಳಿಗೂ ಅಸಮತಾವಾದಿಗಳಿಗೂ ದೊಡ್ಡ ವ್ಯಾಜ್ಯವಿದ್ದಿತು. ವ್ಯಾರೊ ಎರಡು ಕಡೆಯನ್ನೂ ಗಮನಿಸಿ ಬೇಕಾದ ಅಂಶಗಳನ್ನು ತೆಗೆದುಕೊಂಡು, ಉಳಿದವನ್ನು ಬಿಟ್ಟುಕೊಟ್ಟು ಸಮನ್ವಯಕ್ಕೆ ಬರಬೇಕೆಂದು ಬುದ್ಧಿವಾದ ಹೇಳಿದ. ವ್ಯಾಕರಣ ಸಂಬಂಧಿ ಎಂದರೆ ಅವನ ಪ್ರಕಾರ ಕವಿಗಳ, ಚರಿತ್ರಕಾರರ ಮತ್ತು ವಾಗ್ಮಿಗಳ ಅಧ್ಯಯನ; ಅದರ ಉದ್ದೇಶ ನಾಲ್ಕು: ಚೆನ್ನಾಗಿ ಓದುವ ಸಾಮಥ್ರ್ಯ, ಸರಿಯಾದ ಗ್ರಂಥಪಾಠದ ನಿರ್ಣಯ, ವ್ಯಾಖ್ಯಾನ ಮತ್ತು ಬೆಲೆಕಟ್ಟುವಿಕೆ. ಶೈಲಿಯಲ್ಲಿ ಪುಷ್ಕಲ, ಸರಳ, ನಡುವಣ ಎಂಬ ಮೂರು ರೀತಿಗಳನ್ನು ಗುರುತಿಸಿದ. ಹಾಗೆ ಮಾಡಿದವರಲ್ಲಿ ಅವನೇ ಮೊಟ್ಟಮೊದಲಿಗ. ಈ ತ್ರಿ-ಶೈಲೀ ಸೂತ್ರ ಆಮೇಲೆ ವಿಪುಲವಾಗಿ ಪ್ರಸಾರಗೊಂಡಿತು. ವ್ಯಾರೊ ಗದ್ಯ ಪದ್ಯ ಎರಡಕ್ಕೂ ಅದನ್ನು ಅನ್ವಯಿಸಿದ. ತೌಲನಿಕ ವಿಮರ್ಶೆಯನ್ನು ಜಾರಿಗೆ ತಂದವನೂ ಅವನೇ.

ಕ್ರಮೇಣ ರೋಮಿನಲ್ಲಿ ವಾಗ್ಮಿವಿದ್ಯೆ ಅಥವಾ ಭಾಷಣಕಲೆಗೆ ಪರಮೋಚ್ಚ ಸ್ಥಾನವೂ ಗೌರವವೂ ಆದರವೂ ಲಭಿಸಿತು. ಗ್ರೀಕ್ ವಾಗ್ಮಿ ಐಸೊಕ್ರೇಟಿಸ್ ವಿದ್ಯಾಭ್ಯಾಸವನ್ನು ಘನವಿಚಾರಗಳ ಮೇಲೆ ಅಚ್ಚುಕಟ್ಟಾಗಿ ಮಾತನಾಡುವುದಕ್ಕೆ ಕಲಿಯುವಿಕೆ ಎಂದು ವಿವರಣೆ ನೀಡಿದ. ಅದು ಗ್ರೀಕರಿಗಿಂತಲೂ ಹೆಚ್ಚಾಗಿ ಹೆಚ್ಚು ಸಮಂಜಸವಾಗಿ ರೋಮನರಿಗೆ ಒಪ್ಪುವಂತಾಯ್ತು. ಗದ್ಯವೊಂದೇ ಅಲ್ಲ ಪದ್ಯಕಾವ್ಯವೂ ಭಾಷಣಕಲೆಯಲ್ಲಿ ಸೇರಿಕೊಂಡಿತು; ಅದು ಪದ್ಯ ಭಾಷಣ ಅಷ್ಟೇ ವ್ಯತ್ಯಾಸ. ತತ್ವಶಾಸ್ತ್ರ ಕೂಡ ಅದರ ಒಂದು ಅಂಗವಾಯ್ತು. ಪದ್ಯಕವಿ, ಇತಿಹಾಸಕಾರ, ತತ್ತ್ವಜ್ಞ ಈ ಎಲ್ಲರಿಗಿಂತಲೂ ವಾಗ್ಮಿ ಮಹಿಮಾಸ್ಪದ ಎಂಬ ನಂಬಿಕೆ ಬೇರೂರಿತು. ಬಾಲಕರ ಶಿಕ್ಷಣ ಆಟಪಾಠಗಳ ಬೋಧಕರಿಂದ ಆದಿಯಾಗಿ ವ್ಯಾಕರಣ ಬೋಧಕರಿಂದ ಮುಂದುವರಿದು, ವಾಗ್ಮಿವಿದ್ಯೆಯ ಉಪಾಧ್ಯಾಯ ರಿಂದ ಕೊನೆಗೊಳ್ಳುತ್ತಿತ್ತು. ಸಿಸಿರೊವಿನ ನಂಬಿಕೆಯಂತೆ ಭಾಷಣ ಎಲ್ಲ ಸಾಹಿತ್ಯಕ್ಕಿಂತ ಮಿಗಿಲಾದದ್ದು ಎನಿಸಿತ್ತು.

ಕಿ.್ರಪೂ. 86-82ರಲ್ಲಿ ಕಾರ್ನಿಫೀಸಿಯಸ್ ಎಂಬಾತ ಬರೆದದ್ದೆಂದು ಗೊತ್ತಾಗಿರುವ ರ್ಹೆಟರಿಕಾ ಆಡ್ ಹೆರೆನಿಯಮ್ ಎಂಬ 4 ಅಧ್ಯಾಯಗಳ ಪುಸ್ತಕ ಕುತೂಹಲಕರವಾದದ್ದು. ಅದನ್ನು ಬಹಳ ಕಾಲದವರೆಗೆ ಸಿಸಿರೊವಿನ ಕೃತಿಗಳಲ್ಲಿ ಒಂದೆಂದು ಭಾವಿಸಲಾಗಿತ್ತು. ಸಿಸಿರೂ ಅದರಿಂದ ಉಪಕೃತನಾಗಿರುವುದು ನಿಸ್ಸಂದೇಹ. ಹೆಲನಿಸ್ಟಿಕ್ ಗ್ರೀಕರು ರ್ಹೆಟರಿಕ್ ವಿಷಯವಾಗಿ ಪ್ರತಿಪಾದಿಸಿದ್ದ ಎಲ್ಲ ಅಂಶಗಳನ್ನೂ ಲ್ಯಾಟಿನ್ನಿಗೆ ತರುವುದೂ ಸಕಲ ಪಾರಿಭಾಷಿಕ ಶಬ್ದಗಳಿಗೂ ಲ್ಯಾಟಿನ್ ಸಮಶಬ್ದಗಳನ್ನು ಕಂಡುಹಿಡಿದು ಉಪಯೋಗಿಸುವುದೂ ಗ್ರಂಥಕರ್ತನ ಉದ್ದೇಶ ಮತ್ತು ಉತ್ಸಾಹ. ಅವನ ದೇಶಭಕ್ತಿ ಅಪಾರ. ಉದಾಹರಣೆಯೆಲ್ಲವೂ ಲ್ಯಾಟಿನ್ ಸಾಹಿತ್ಯದಿಂದ ತೆಗೆದದ್ದು ಅಥವಾ ಗ್ರಂಥಕರ್ತ ತಾನೇ ನಿರ್ಮಿಸಿದ್ದು. ನ್ಯಾಯ ಸಂಬಂಧಿ, ಮಂತ್ರಣ ಸಂಬಂಧಿ, ಪ್ರದರ್ಶನ ಸಂಬಂಧಿ-ಇವು ಭಾಷಣದ ಮೂರು ವಿಧಗಳು. ಪ್ರಸ್ತಾವನೆ, ಆಖ್ಯಾನ, ವಿಭಜನೆ, ರುಜುವಾತು, ಅಪ್ರಮಾಣ ಖಂಡನೆ ಮತ್ತು ಉಪಸಂಹಾರ-ಇವು ಭಾಷಣದ ಆರು ಅಂಗಗಳು. ಅಭಿಪ್ರಾಯ ಮಾಲೆ, ಒಪ್ಪ ಓರಣ, ಶೈಲಿ, ಜ್ಞಾಪಕಶಕ್ತಿ ಮತ್ತು ಉಪನ್ಯಾಸ-ಇವು ಭಾಷಣ ಸಿದ್ಧತೆಯ ಐದು ಮುಖಗಳು. ಗಂಭೀರ, ಮಧ್ಯಮ, ಸರಳ-ಇವು ಭಾಷಣ ಶೈಲಿಗಳು. ವಾಗ್ಮಿ ಈ ಮೂರು ಬಗೆಯನ್ನೂ ಸಮರ್ಪಕವಾಗಿ ಬಳಸತಕ್ಕದ್ದು. ಪದ ಮತ್ತು ಪದಪುಂಜಗಳ ವಿಚಾರಣೆಯನ್ನೂ ಈ ಗ್ರಂಥದಲ್ಲಿ ಪ್ರಸ್ತಾಪಿಸಲಾಗಿದೆ. ರೋಮನ್ ವಾಗ್ಮಿಗಳಲ್ಲಿ ಅತ್ಯಂತ ಎತ್ತರದ ಗದ್ದುಗೆಗೆ ಅರ್ಹನಾದವ ಸಿಸಿರೊ (ಕ್ರಿ.ಪೂ. 106-43). ಪ್ರಪಂಚದ ಮಹಾವಾಗ್ಮಿಗಳಲ್ಲಿ ಆತ ಒಬ್ಬ. ಭಾಷಣ ಕಲೆಯ ಮೇಲೆ ಉತ್ಕøಷ್ಟ ಗ್ರಂಥಗಳನ್ನೂ ಬರೆದಿದ್ದಾನೆ. ರಾಜಕೀಯದಲ್ಲೂ ಮಂತ್ರಾಲೋಚನೆಯಲ್ಲೂ ಪ್ರಬಲ ಪಾತ್ರವಹಿಸಿ, ದೇಶಭ್ರಷ್ಟತೆಯನ್ನು ಅನುಭವಿಸಿ, ಕ್ರಿ.ಪೂ. 57ರಲ್ಲಿ ರೋಮಿಗೆ ಹಿಂದಿರುಗಿದಾಗ ಪದವಿ, ಅಧಿಕಾರ, ಪ್ರಭಾವ ಯಾವೊಂದೂ ಅವನನ್ನು ಪೀಡಿಸಲಿಲ್ಲ; ಬರೆವಣಿಗೆಗೆ ತೊಡಗಿದ. ಭಾಷಣವಿದ್ಯೆ ಅವನ ಹೃದಯಕ್ಕೆ ನಾಟಿದ್ದಿತಾಗಿ ಅದನ್ನೇ ವಿಷಯವಾಗಿ ಆರಿಸಿಕೊಂಡ. ತನಗೆ 22 ವರ್ಷ ತುಂಬಿದ್ದಾಗ ವಿಷಯದ ಆಯ್ಕೆ ಎಂಬ ಎರಡು ಅಧ್ಯಾಯದ ಕಿರುಹೊತ್ತಗೆಯನ್ನು ರಚಿಸಿದ್ದ; ಆಮೇಲೆ ಅದು ಕೇವಲ ಬಾಲಿಶ ಕೃತಿಯೆಂದು ಅವನಿಗೇ ಬೇಸರ ತಂದಿತ್ತು. ಭಾಷಣವಿದ್ಯೆ (ಕ್ರಿ.ಪೂ. 51) ಬ್ರೂಟಸ್ (ಕ್ರಿ.ಪೂ. 46), ಭಾಷಣಕಾರ (ಕ್ರಿ.ಪೂ. 45) ಇವು ಅವನ ಉದ್ಗ್ರಂಥಗಳು. ಭಾಷಣದ ವಿಭಾಗಗಳು, ವಿಚಾರಗಳು ಎಂಬ ಕೃತಿಗಳನ್ನೂ ಆತ ಬರೆದಿದ್ದಾನೆ.

ಭಾಷಣವಿದ್ಯೆ ಎಂಬ ಕೃತಿಯಲ್ಲಿ ಕ್ರಾಸಸ್ಸನ ಗ್ರಾಮಾಂತರ ಮಹಲಿನಲ್ಲಿ ನಡೆದ ಸಂವಾದದ ವರದಿಯಿದೆ. ಅದರಲ್ಲಿ ಭಾಷಣಕಾರನ ಲಕ್ಷಣಗಳು, ಕಲಿಕೆಯ ವಿಧಾನ, ಭಾಷಣದ ರೀತಿ ಮುಂತಾದ ವಿಚಾರಗಳು ಮಥನ ಗೊಂಡಿವೆ. ಬ್ರೂಟಸ್ ಎಂಬ ಕೃತಿಯಲ್ಲಿ ವಾಗ್ಮಿತೆಯ ಇತಿಹಾಸವನ್ನು ನಿರೂಪಿಸಲಾಗಿದೆ. ಮೊದಲಿಗೆ ಗ್ರೀಕರ ವಿಚಾರವನ್ನು ಅಲ್ಪಸ್ವಲ್ಪ ಹೇಳಿ, ರೋಮನರ ಸು. 200 ಭಾಷಣಕಾರರ ವೈಖರಿಯನ್ನು ಅದರಲ್ಲಿ ವರ್ಣಿಸ ಲಾಗಿದೆ. ಪ್ರಾಸಂಗಿಕವಾಗಿ ಕಾವ್ಯ ಪರೀಕ್ಷೆಯೂ ಅಟ್ಟಿನಿಸ್ಟ್ (ಶಿಷ್ಟತೆ) ಮತ್ತು ಏಷ್ಯನಿಸ್ಟ್‍ಗಳ (ಆಡಂಬರ) ವಾದವಿವಾದವೂ ಬರುತ್ತವೆ. ಭಾಷಣಕಾರ ಎಂಬ ಕೃತಿ ಬ್ರೂಟಸ್ಸಿಗೆ ಸಿಸಿರೂ ಬರೆದ ಕುಶಲಪತ್ರ. ಕಾವ್ಯ ಮತ್ತು ವಾಗ್ಮಿತೆಗಳನ್ನು ಕುರಿತ ಪ್ರಶ್ನೆಗಳಿಗೆ ಅದರಲ್ಲಿ ಉತ್ತರವಿದೆ. ಆಡಂಬರ ಸರಳತೆಗಳಲ್ಲಿ ಯಾವೊಂದರ ಮೂರ್ಖ ಅನುಯಾಯಿ ಯಾದರೂ ಒಳ್ಳೆಯದಲ್ಲ, ಆದರ್ಶ ಭಾಷಣಮಾರ್ಗವೊಂದಿದೆ; ಅದನ್ನು ಆಶ್ರಯಿಸಿ ನೈಪುಣ್ಯ ಸಾಧಿಸುವುದೇ ಲೇಸು ಎಂಬುದು ಸಿಸಿರೊವಿನ ದೃಢ ನಂಬಿಕೆ ಹಾಗೂ ಉಪದೇಶ.
ಸಿಸಿರೊಗೆ ಅಸೂಯೆ ತುಂಬಿದ ವೈರಿಗಳು ಹಲವರಿದ್ದರು. ಅವನು ವಾಗಾಟೋಪದವ, ಏಷ್ಯಾಟಿಕ್ ಮಾರ್ಗದ ಪ್ರೇಮಿ, ಬರಿ ಮಾತುಗಾರ. ನಾವು ವಿಷಯಕ್ಕೆ ಪ್ರಾಮುಖ್ಯ ಕೊಡುವ ಸುಲಭ ನೇರ ವಚನದವರು, ಅಟ್ಟಿಕ್ ಮಾರ್ಗದವರು ಎಂದು ಅವರ ವಾದ. ಹೀಗೆ ಅಟ್ಟಿಕ್-ಏಷ್ಯಾಟಿಕ್ ವಾಗ್ಯುದ್ಧ ಪ್ರಾರಂಭವಾಗಿ ಬಲು ಬಿರುಸಿನಿಂದ ನಡೆಯಿತು. ದಿಟವಾಗಿ ಸಿಸಿರೂ ಯಾವ ಪಂಥದ ವ್ಯಾಮೋಹಿಯೂ ಅಲ್ಲ. ನೈಜ ಅಟ್ಟಿಕ್ ಮಾರ್ಗ ಯಾವುದು, ಅದರ ಗುಣದೋಷಗಳು, ಏಷ್ಯಾಟಿಕ್ ಮಾರ್ಗದ ಉದಯ, ಅದರಲ್ಲೂ ಗೋಚರವಾಗುವ ಗುಣಗಳು, ಅದರ ಪ್ರಕಟ ದುರ್ಗುಣ-ಹೀಗೆ ಎಲ್ಲ ಅಂಶಗಳನ್ನೂ ವಿವೇಚನೆಯಿಂದ ವಿವರಿಸಿ ತನ್ನ ಭಾಷಣಮಾರ್ಗವನ್ನು ಚೆನ್ನಾಗಿ ತರ್ಕಬದ್ಧವಾಗಿ ಸಮರ್ಥಿಸಿದ. ಹಿಂದಿನಿಂದ ಬಂದಿದ್ದ ಭಾಷಣಕಲೆಯ ಸಾಂಪ್ರದಾಯಿಕ ಅಂಗ ಉಪಾಂಗವೆಲ್ಲವನ್ನೂ ಯುಕ್ತ ರೀತಿಯಲ್ಲಿ ವಿಚಾರಣೆಮಾಡಿ ತನ್ನ ಸ್ವಂತ ಅಭಿಪ್ರಾಯಗಳನ್ನೂ ಸಲಹೆಗಳನ್ನೂ ಮುಚ್ಚುಮರೆಯಿಲ್ಲದೆ ನಿರೂಪಿಸಿದ. ಇವುಗಳಲ್ಲಿ ಮಾನ್ಯಗೊಳ್ಳತಕ್ಕ ಸಲಹೆಗಳೇ ಹೆಚ್ಚಾಗಿವೆ; ಬಿಡತಕ್ಕದ್ದು ಕಡಮೆ. ಭಾಷಣಕ್ಕೆ ಅವನು ಕೊಟ್ಟ ಆದ್ಯತೆಯೂ ಗೌರವವೂ ಸಾಹಿತ್ಯಕ್ಕೆ ಕೊಂಚ ಕೊರೆ ಉಂಟುಮಾಡಿದ್ದುಂಟು. ಭಾಷಣದ ಲಕ್ಷಣ ಸಾಹಿತ್ಯಕ್ಕೂ ಒಪ್ಪುತ್ತದೆ ಎಂಬ ಅಭಿಮತ ಆ ಕಾಲದಲ್ಲಿ ನೆಲೆಸಿತ್ತು. ಇದರಿಂದಾಗಿ ರೋಮನ್ ಸಾಹಿತ್ಯ ಸ್ವಲ್ಪಮಟ್ಟಿನ ಕೃತಕತೆಯನ್ನು ಪಡೆದುಕೊಂಡಿತೆನ್ನ ಬಹುದು.

ಗದ್ಯಲಯದ ಬಗೆಗೆ ಸಿಸಿರೊಗೆ ತುಂಬ ವಾಂಛಲ್ಯವಿತ್ತು. ಅದನ್ನು ಅಭ್ಯಾಸಗೈದು ಅದರ ವಿವರಣೆ ಮಾಡುವುದು ಅವನಿಗೆ ಹಿತಕಾರ್ಯ ವಾಗಿತ್ತು. ಗ್ರೀಕರು ಅದನ್ನು ಎತ್ತಿ ಹಿಡಿದಿದ್ದರೂ ಅದು ರೋಮಿಗೆ ಪದವಿಟ್ಟದ್ದು ಇತ್ತೀಚೆಗೆ ಎಂಬುದನ್ನು ಅವನು ಬಲ್ಲವನಾಗಿದ್ದ. ಅಟ್ಟಿಕ್ ಪಕ್ಷದವರೂ ಮಂದಗಾಮಿಗಳೂ ಅಂಧಶ್ರದ್ಧೆಯವರೂ ದೇಶೀಯತೆಗೆ ಗದ್ಯಲಯದಿಂದ ಹಾನಿಯೆಂದೂ ಆರ್ಭಟಿಸಿದರು. ಹಳೆಯ ರೋಮನ್ ಸಾಹಿತಿಗಳಲ್ಲಿ ಅದು ಇರಲೇ ಇಲ್ಲವೆಂದು ಅವರ ಕೂಗು. ಅವರಿಗೆ ಅದು ತಿಳಿದಿದ್ದಲ್ಲಿ ಅದನ್ನು ಖಂಡಿತವಾಗಿ ಬಳಸಿಕೊಳ್ಳುತ್ತಿದ್ದರು ಎಂಬುದು ಸಿಸಿರೊನ ಪ್ರತಿವಾದ. ಲಯಗತಿಯನ್ನು ಮೆಚ್ಚದ ಕಿವಿಗಳು ಕಿವಿಗಳೆ? ಅವು ಮನುಷ್ಯರವೆ ? ಎಂದು ಆತ ಸವಾಲು ಹಾಕತ್ತಾನೆ, ಅಟ್ಟಿಕ್ ಪದ್ಧತಿಯ ವೀರಾಭಿಮಾನಿಗಳಲ್ಲಿ ಬುದ್ಧಿಚಾತುರ್ಯವೂ ಹಾಸ್ಯವೂ ಕಡಮೆ ಎನ್ನುವ ಪ್ರಸಂಗದಲ್ಲಿ ಅವೆರಡರ ದೀರ್ಘ ಪ್ರಸ್ತಾಪವನ್ನು ಸಿಸಿರೂ ತಂದಿದ್ದಾನೆ. ವಿನೋದ ಅರ್ಥನಿಷ್ಠ ಶಾಬ್ದಿಕ ಎಂಬ ವಿಭಜನೆಯನ್ನು ಅಂಗೀಕರಿಸಿ, ಅದಕ್ಕೆ 13 ಇದಕ್ಕೆ 7 ಬಗೆಯೆಂದು ತಿಳಿಸಿ ಸಂಬಂಧಿಸಿದ ವಿನೋದದಿಂದ ನಗು ಹೆಚ್ಚು ಎನ್ನುತ್ತಾನೆ.

ಬರಿ ಸದ್ದಿನ ಪದಜಾಲ ಹುಚ್ಚಿನ ಕುರುಹಲ್ಲವೆ?; ಅತ್ಯುತ್ತಮ ವಾಗ್ಮಿ ಬೋಧಿಸುತ್ತಾನೆ, ಸಂತಸಗೊಳಿಸುತ್ತಾನೆ, ಎದೆ ಕಲಕುತ್ತಾನೆ; ಬೊಧನೆ ಅವನ ಕರ್ತವ್ಯ. ಹರ್ಷ ಕೊಡುವುದು ಶ್ಲಾಘನೀಯ, ಕಲಕುವುದು ಅತ್ಯಗತ್ಯ. ಕೊರೆ ಅತಿಗಿಂತ ಹೆಚ್ಚು ಕೇಡು; ಗದ್ಯದಲ್ಲಿ ಪದದೋಷ; ಯಾವ ಕಲೆಯೂ ಅಂಕುರಾರ್ಪಣ ನೆಲೆಯಲ್ಲಿಯೇ ಪರಿಪೂರ್ಣತ್ವ ಪಡೆಯಲಿಲ್ಲ ಮುಂತಾದ ಅವನ ಅನೇಕ ಹೇಳಿಕೆಗಳು ಅಂಗೀಕೃತ ಸೂತ್ರಗಳಂತೆ ವಿಮರ್ಶೆಯೊಳಕ್ಕೆ ಬಂದು ಸೇರಿಕೊಂಡಿವೆ.

ಫಿಲೊಡೀಮಸ್ ಅಥೆನ್ಸಿನಲ್ಲಿ ವ್ಯಾಸಂಗ ಪೂರೈಸಿ ರೋಮಿಗೆ ಬಂದು, ಪೀಸೋ ಎಂಬ ಶ್ರೀಮಂತನ ಆಶ್ರಯ ಪಡೆದು, ನೇಪಲ್ಸಿನಲ್ಲಿ ಒಂದು ವಿದ್ಯಾಶಾಲೆ ಪ್ರಾರಂಭಿಸಿದ. ವರ್ಜಿಲ್ ಅಲ್ಲಿ ಪಾಠ ಕಲಿತವ. ಫಿಲೊ ಡೀಮಸ್ ಬರೆದದ್ದೆನ್ನಲಾದ ಎರಡು ಪುಸ್ತಕಗಳಲ್ಲಿ ಕಾವ್ಯಮೀಮಾಂಸೆಯ ಐದನೆಯ ಅಧ್ಯಾಯವೂ ಭಾಷಣವಿದ್ಯೆಯ ನಾಲ್ಕು ಅಧ್ಯಾಯಗಳೂ ದೊರೆತಿವೆ. ಕ್ರಿ.ಪೂ. 3 ಮತ್ತು 2ನೆಯ ಶತಮಾನಗಳ ಸಿದ್ಧಾಂತಗಳನ್ನು ಉದ್ಧರಿಸಿ ಅವುಗಳ ಮೇಲೆ ಟೀಕೆ ಮಾಡುವುದು ಫಿಲೊಡೀಮಸನ ವಾಡಿಕೆ. ಆ ಸಿದ್ಧಾಂತಗಳಿಗೇ ಹೆಚ್ಚು ಗಮನ ಕೊಟ್ಟು ಅವನ ಸ್ವಂತ ಅಭಿಪ್ರಾಯಗಳನ್ನು ಅಲಕ್ಷಿಸುವುದು ಅನೇಕರಲ್ಲಿ ಕಂಡುಬರುತ್ತದೆ. ಅದರೆ ಅವನೊಬ್ಬ ಧೈರ್ಯಶಾಲಿ, ಆತ್ಮ ಪ್ರತ್ಯಯದಿಂದ ಕೂಡಿದವ, ಲೋಕವಿರುದ್ಧವಾದ ಮಾತುಗಳನ್ನು ಆಡುವುದಕ್ಕೆ ಹಿಂದೆಗೆಯದವ, ಆದ್ದರಿಂದ ಆತ ನಮ್ಮ ಕೂತೂಹಲ ಕೆರಳಿಸುತ್ತಾನೆ. ಕಾವ್ಯದ ವಿಚಾರವಾಗಿ ಅವನ ನಿರ್ಧಾರ ಹೀಗಿತ್ತು: ಶಿಕ್ಷಣವಾಗಲಿ ನೀತಿಬೋಧೆಯಾಗಲಿ ಅದರ ಕರ್ತವ್ಯವಲ್ಲ; ಜೀವನದ ಅನುಕರಣವಲ್ಲ ಕಾವ್ಯ. ಅದಕ್ಕೂ ವಾಸ್ತವಿಕ ಸತ್ಯಕ್ಕೂ ಏನೂ ಸಂಬಂಧವಿಲ್ಲ. ಪರಿಶೀಲನೆಗೆ ಒಂದು ಪದ್ಯಕಾವ್ಯವನ್ನು ಇಡಿಯಾಗಿ ತೆಗೆದುಕೊಳ್ಳಬೇಕು. ಕಾವ್ಯಕ್ಕೆ ಬೇರೆ ಬೇರೆ ಮುಖಗಳಿವೆ ಎಂದು ಭಾವಿಸಿಕೊಂಡು ಅವನ್ನು ಬಿಡಿ ಬಿಡಿಯಾಗಿ ಪರೀಕ್ಷಿಸುವವರಿಗೆ ಕವಿತ್ವದ ನೈಜ ಲಕ್ಷಣ ಗೊತ್ತಿಲ್ಲ; ಪದಗಳ ದನಿ ಮತ್ತು ನಾದಮಾಧು ರ್ಯಕ್ಕೆ ಅಧಿಕ ಮಾನ್ಯತೆ ಕೊಡುವುದು ತಪ್ಪು; ಕಾವ್ಯವೂ ವಿಮರ್ಶೆಯೂ ಮುಖ್ಯವಾಗಿ ಬೌದ್ಧಿಕ ವಿಚಾರ; ಎಲ್ಲಕ್ಕೂ ಸ್ಪಷ್ಟ ಪ್ರಮಾಣಸೂತ್ರಗಳಿವೆ; ಕಾವ್ಯ ತತ್ತ್ವಶಾಸ್ತ್ರವಲ್ಲ.

ಭಾಷಣಕಲೆಯ ವಿಚಾರವಾಗಿ ಅವನ ಅಭಿಪ್ರಾಯವಿದು: `ಲೇಖಕನ ವೈಯಕ್ತಿಕ ಅಪ್ರಧಾನ ವಿಚಾರ; ಲೇಖಕನಿಗೆ ತುಂಬ ಜ್ಞಾನ ಅನಾವಶ್ಯಕ; ಸರಳ ಮಾರ್ಗವೇ ಅತ್ಯುತ್ಕøಷ್ಟ; ನಾದ ಮಾಧುರ್ಯ ಮುಖ್ಯ ಗುರಿಯಾಗ ಲಾರದು; ವಸ್ತುಗಳನ್ನು ಪದಜಾಲ ಅನುಕರಿಸಲಾರದು; ಅನೇಕ ನಿಯಮ ನಿಬಂಧನೆ ಸುಮ್ಮನೆ ಮುಜಗರ, ಅವು ಬೇಕಾಗಿಲ್ಲ; ಕಾವ್ಯ ಭಾಷಣಗಳ ಏಕೈಕ ಉದ್ದೇಶ ಹರ್ಷವೀಯುವಿಕೆ, ಆನುಷಂಗಿಕವಾಗಿ ಕಾವ್ಯ ಬೋಧಿಸಬಹುದು. ಆದರೆ ಅಂದಿನ ಗಣ್ಯಕವಿಗಳಾಗಲಿ ವಿಮರ್ಶಕರಾಗಲಿ ಅವನ ವಿಚಾರಗಳನ್ನು ಗಣನೆಗೆ ತೆಗದುಕೊಂಡಂತೆ ತೋರುವುದಿಲ್ಲ.

ಅಲೆಕ್ಸಾಂಡ್ರಿಯ ಪಂಥ: ಕ್ರಿ.ಪೂ. ಒಂದನೆಯ ಶತಮಾನದ ಮಧ್ಯದಲ್ಲಿ ಕವಿಗಳ ಒಂದು ಸಣ್ಣ ಕೂಟ ಅಲೆಕ್ಸಾಂಡ್ರಿಯ ಪಂಥವೆಂಬ ಹೆಸರಿನಿಂದ ಸ್ಥಾಪಿತವಾಗಿ ಕೆಲಸಮಾಡತೊಡಗಿತು. ಅದರ ನಾಯಕ ಮಹಾಕವಿ ಕ್ಯಾಟಲಸ್; ಕಾಲ್ವಸ್ ಸಿನ್ನಾ, ಕಾರ್ನಿಫೀಸಿಯಸ್ ಅವನ ಜೊತೆಗಾರರು. ಅವರು ಜನಜೀವನದಿಂದ ದೂರವಿರುತ್ತಿದ್ದ ಸ್ವಸಂತುಷ್ಟಿಯ ಹವ್ಯಾಸಿಗಳು ವಿದ್ಯಾವಂತರಿಗೂ ಗೊತ್ತಿರದ ಕ್ಲಿಷ್ಟ ಮಸುಕು ಜ್ಞಾನದ ಅಪೇಕ್ಷೆ; ಆಂತರ್ಯದ ಭಾವ ಭಾವನೆಗಳನ್ನು ಸೂಕ್ಷ್ಮವಾಗಿ ಗ್ರಹಿಸಿಕೊಳ್ಳುವ ಆತುರ; ಅವುಗಳ ಹೊರಗೆಡಹುವಿಕೆಯಲ್ಲಿ ವಿಚಿತ್ರರೀತಿ; ನೂತನ ಕಥನಗಾರಿಕೆ; ನಿರೂಪಣೆಯಲ್ಲಿ ಎಚ್ಚರದ ಕುಸುರಿಕೆಲಸ-ಇವು ಅವರ ಗುಣಲಕ್ಷಣ. ಉದ್ದದ ಕಥನಕಾವ್ಯಗಳನ್ನೂ ರೂಪಕಗಳನ್ನೂ ತ್ಯಜಿಸಿ, ಅವರ ಕಿರುಕಥೆ, ಪ್ರಣಯಗೀತೆ, ಪೌರಾಣಿಕ ಕಥಾನಕ, ನಾಟುನುಡಿ ಮದುವೆಹಾಸುಗಳನ್ನು ಬರೆದರು. ಕೃತಕತೆ ಆತ್ಮವರ್ಣನೆ ಲೈಂಗಿಕತೆ ಯಿಂದ ಕೂಡಿದ ಮನೋಭಾವವನ್ನು ಸಾಹಿತ್ಯದೊಳಕ್ಕೆ ತುರುಕಿದರು. ಕ್ಲಿಯೊಪಾತ್ರಳನ್ನು ಕಂಡು ಜೂಲಿಯಸ್ ಸೀಸರನ ಮೋಹವೂ ಅವಳು ರೋಮಿಗೆ ಬಂದ ಎರಡು ವರ್ಷ (ಕ್ರಿ.ಪೂ. 46-44) ಅಲ್ಲಿ ಬೀಡು ಬಿಟ್ಟದ್ದೂ ಅಲೆಕ್ಸಾಂಡ್ರಿಯದ ಪ್ರಭಾವವನ್ನು ಇಮ್ಮಡಿಸಿದವು. ಒಂದು ಬಗೆಯ ರೊಮ್ಯಾಂಟಿಕ್ ಭಾವನೆ ರೋಮನರನ್ನು ಅತ್ತ ಇತ್ತ ಸೆಳೆಯತೊಡಗಿತು. ವರ್ಜಿಲ್, ಗಾಲಸ್, ಓವಿಡ್, ಪ್ರಾಪರ್ಟಿ ಯಸ್, ಟೈಬ್ಯುಲಸ್ ಮುಂತಾದ ಕವಿಗಳಿಗೆ ಕೂಡ ಅಲೆಕ್ಸಾಂಡ್ರಿಯ ಹವೆ ಇಷ್ಟವಾಯ್ತು. ರೋಮನರು ಹೆಲನಿಕ್ ಗ್ರೀಕರನ್ನು ಹಿಂಬಾಲಿಸಬೇಕೋ ಹೆಲನಿಸ್ಟಿಕ್ (ಅಥವಾ ಅಲಕ್ಸಾಂಡ್ರಿಯ) ಗ್ರೀಕರನ್ನೋ ಎಂಬ ವಿಚಾರದಲ್ಲಿ ವಾಗ್ಯುದ್ಧ ಉಪಕ್ರಮವಾಯ್ತು.

ಅಗಸ್ಟಸ್ ಅವಧಿ: ಜೂಲಿಯಸ್ ಸೀಸರನನ್ನು ಕ್ರಿ.ಪೂ. 44ರಲ್ಲಿ ಕೊಲೆ ಮಾಡಲಾಯಿತು. ಅಲ್ಲಿಂದ ಮುಂದೆ ಆಕ್ಟೇವಿಯಸ್ ಸೀಸರನ ಪ್ರಾಬಲ್ಯ ವೃದ್ಧಿಗೊಂಡಿತು. ಆತ ಸೀಸರನ ಹಂತಕರಾದ ಬ್ರೂಟಸ್ ಮತ್ತು ಕ್ಯಾಸಿಯಸ್ಸರನ್ನು ಆಂಟೊನಿಯ ಸಹಾಯದಿಂದ 42ರಲ್ಲಿ ಸೋಲಿಸಿ ನಾಶಮಾಡಿ, ಕ್ರಮೇಣ ಆಂಟೊನಿಯನ್ನು  ಹಿಂದಕ್ಕೆ ತಳ್ಳಿ, ರೋಮಿನ ಆಡಳಿತ ಸೂತ್ರಗಳನ್ನು ತನ್ನ ಕೈಗೆ ತೆಗೆದುಕೊಂಡು ಇಬ್ಬರಿಗೂ ವೈರ ಬೆಳೆದು ಕೊನೆಗೆ ಕ್ರಿ.ಪೂ. 31ರಲ್ಲಿ ಮಾರಣ ಕಾಳಗ ಜರುಗಿತು. ಆಂಟೊನಿ, ಅವನ ಪ್ರೇಯಸಿ ಕ್ಲಿಯೊಪಾತ್ರ ಇಬ್ಬರೂ ಮಡಿದರು. ಆಕ್ಟೇವಿಯಸ್ ರೋಮಿನ ಏಕೈಕ ರಾಜನಾದ. ಕಿ.ಪೂ. 27ರಲ್ಲಿ ಅವನಿಗೆ ಅಗಸ್ಟಸ್ ಎಂಬ ಗೌರವದ ನಾಮಾಂಕಿತ ಒದಗಿ, ಸಾರ್ವಭೌಮತ್ವ ಸಂದಿತು. ಕ್ರಿ.ಶ. 14ರಲ್ಲಿ ಅವನು ಅಳಿದ. ಕ್ರಿ.ಪೂ. 44 ರಿಂದ ಕ್ರಿ.ಶ. 17ರ ತನಕ ಅಗಸ್ಟಸ್ ಅವಧಿ ಎಂದು ಪರಿಗಣಿಸಲಾಗಿದೆ. ಶಾಂತಿ ಸೌಭಾಗ್ಯಗಳಲ್ಲೇ ಅಲ್ಲದೆ ಕೆಲ ಸಾಹಿತ್ಯಗಳಲ್ಲೂ ತನ್ನ ಕಾಲಾವಧಿ ಹಿರಿಮೆ ಹೊಂದಬೇಕೆಂಬುದು ಅಗಸ್ಟಸ್ಸನ ಹೆಬ್ಬಯಕೆಯಾಗಿತ್ತು. ಅವನ ಕಾಲದಲ್ಲಿ ದೊಡ್ಡ ಕವಿಗಳೂ ವಿಮರ್ಶಕರೂ ಇದ್ದು ಅವನ ಆಸೆ ಬಲುಮಟ್ಟಿಗೆ ಕೈಗೂಡಿತು.

ಡಯೊನೀಸಿಯಸ್ ಕ್ರಿ.ಪೂ. 30ರಲ್ಲಿ ರೋಮಿಗೆ ಬಂದು ಅಲ್ಲಿ 20 ವರ್ಷ ತಂಗಿದ. ಸಾಹಿತಿಗಳ ಒಂದು ಸಣ್ಣ ಕೂಟದ ಸದಸ್ಯನಾಗಿದ್ದ. ಕೂಟದವರಿಗೆ ಹೊಗಳಿಕೆ-ತೆಗಳಿಕೆಯ ವಿಮರ್ಶೆ ಬೇಕಾಗಲಿಲ್ಲ; ಗುಣದೋಷಗಳನ್ನು ಎತ್ತಿ ತೋರಿಸುವುದರ ಜೊತೆಗೆ ಗಾಢ ಪರಿಶೀಲನೆ ನಡೆಸಿ ಒಬ್ಬೊಬ್ಬರನ್ನೂ ಹೋಲಿಸಿನೋಡಿ ಬೆಲೆ ಕಟ್ಟತಕ್ಕದ್ದು ಎಂಬ ಸಂಕಲ್ಪ ಅವರದ್ದಾಯ್ತು. ಅಂಥ ತೌಲನಿಕ ವಿಮರ್ಶೆ ಅಪರೂಪವಾಗಿತ್ತು. ಡಯೊನೀಸಿಯಸ್ ಸಿಸಿರೊವಿನ ಕೆಲಸವನ್ನು ಮುಂದುವರಿಸಿದ. ಸಿಸಿರೊವಿನ ಕಾಲದಲ್ಲಿ ಏಷ್ಯನಿಷ್ಟ್ ರಂಪ ಎಬ್ಬಿಸಿತ್ತಾಗಿ ಅದನ್ನು ಪ್ರತಿಭಟಿಸುವುದಕ್ಕೆ ಅವನ ಹೆಚ್ಚು ಗಮನ ವಿನಿಯೋಗಿಸಬೇಕಾಯಿತು. ಡಯೊನೀಸಿಯಸ್ ಬರುವ ಹೊತ್ತಿಗೆ ಅಟ್ಟಿನಿಸ್ಟ್ ಬಲಿಷ್ಠವಾಗುತ್ತಿತ್ತು; ಆದ್ದರಿಂದ ಅದರ ಪ್ರತಿಪಾದನೆಯೇ ಅವನ ಉದ್ದೇಶವಾಯ್ತು. ಕ್ರಿ.ಪೂ. 4ನೆಯ ಶತಮಾನದ ಗ್ರೀಕರ ಮಾದರಿಯನ್ನು ಅನುಕರಿಸಬೇಕೆಂದು ಆತ ಅಪೇಕ್ಷಿಸಿದ. ಮಾದರಿಯ ಸಲ್ಲಕ್ಷಣಗಳನ್ನು ಅನುಕರಿಸಬೇಕೇ ಹೊರತು ಅವಲಕ್ಷಣಗಳ ನ್ನಲ್ಲವೆಂದು ಹೇಳಿದ. ಭಾಷಣವಾಗಲಿ ಕಾವ್ಯವಾಗಲಿ ಅದನ್ನು ನೇರ್ಪಾಗಿ ವಿರಚಿ ಸುವುದಕ್ಕೆ ಮೂರು ಅಂಶಗಳು ಅಗತ್ಯವೆಂದು ಅಭಿಪ್ರಾಯಪಟ್ಟ-ಸಹಜಶಕ್ತಿ, ತಪ್ಪಿಗೆಡೆಗೊಡದ ವ್ಯಾಸಂಗ, ದುಡಿಮೆ-ಇವೇ ಆ ಮೂರು ಅಂಶಗಳು. ಹೋಮರ್, ಡೆಮಾಸ್ತನೀಸ್, ಐಸೊಕ್ರೇಟಿಸ್, ಪ್ಲೇಟೊ ಎಲ್ಲರೂ ಅವನ ದೃಷ್ಟಿಕೋನವನ್ನು ಇಷ್ಟಪಟ್ಟರು. ವಿಷಯ ರೀತಿಗಳ ಪೈಕಿ ರೀತಿ ವಿಷಯಕ್ಕೆ ಅಧೀನ. ಪದಗಳಿಗೆ ನೈಸರ್ಗಿಕ ಸೌಂದರ್ಯವಿದೆ. ಅಕ್ಷರ ಮತ್ತು ಉಚ್ಚಾರಾಂಶಗಳ ಅಂದಚಂದ ಅದಕ್ಕೆ ಕಾರಣ. ಪದ ಪದಗುಚ್ಛ ವಾಕ್ಯಗಳೆಲ್ಲವನ್ನೂ ಉಚಿತ ಸ್ಥಾನದಲ್ಲಿಟ್ಟು ಕ್ರಮವ್ಯವಸ್ಥೆಯನ್ನು ಪಾಲಿಸತಕ್ಕದ್ದು. ಸ್ವರ ವ್ಯಂಜನಗಳ ದನಿಯನ್ನು ಸಮಂಜಸವಾಗಿ ಉಪಯೋಗಿಸಿಕೊಳ್ಳಬೇಕು; ಗ್ರೀಕರಿಗೆ ಆ ಜಾಣ್ಮೆ ಹುಟ್ಟಿನಿಂದ ಬಂದಿತ್ತು. ಗದ್ಯ ಲಯಬದ್ಧವಾಗಿರಬೇಕು, ಆದರೆ ಛಂದೋಬದ್ಧವಾಗಕೂಡದು, ಎಲ್ಲೆಲ್ಲೂ ಔಚಿತ್ಯ ಆಳುತ್ತಿರತಕ್ಕದ್ದು. ಎಂದು ಡಯೋನೀಸಿಯಸ್ ಸಾರಿದ.

ಹೋಮರ್, ಡೆಮಾಸ್ತನೀಸ್, ಹೆರೊಡೋಟಸ್, ಥೊಕಿಡಿಡೀಸ್ ಮೊದಲಾದವರ ಸುದೀರ್ಘ ಪರಿಶೀಲನೆಯಷ್ಟೇ ಅಲ್ಲದೆ ಪ್ಲೇಟೊ, ಸ್ಯಾಫೊ ಮುಂತಾದವರ ತುಣುಕು ವಿಮರ್ಶೆಯೂ ಡಯೊನೀಸಿಯಸ್ಸನಲ್ಲಿ ಬರುತ್ತದೆ. ಅವನು ಉತ್ತಮ ರಸಾಸ್ವಾದಿಯಾದ್ದರಿಂದ ಅವನ ವಿಮರ್ಶೆ ಒಟ್ಟಿನ ಅನಿಸಿಕೆಯಲ್ಲೂ ಬಿಡಿ ವಿವರಗಳ ಸಂವೇದನೆಯಲ್ಲೂ ಮೇಲ್ಮಟ್ಟದ್ದಾಗಿದೆ. ಆದರೆ ಡೆಮಾಸ್ತನೀಸನ ಹೊಗಳಿಕೆ ಕೆಲವೊಮ್ಮೆ ಬೇಸರ ತರುವಷ್ಟು ಹೆಚ್ಚಾಗಿದೆ. ಪ್ಲೇಟೊವಿನ ವಿಚಾರದಲ್ಲಿ ಅವನಿಗೆ ಸಾಕಷ್ಟು ಸೌಹಾರ್ದತೆ ಇರಲಿಲ್ಲ. ಲೇಖನ ರೀತಿಯ ಮೂರು ಬಗೆಗಳನ್ನು ಕಟ್ಟುನಿಟ್ಟಾದದ್ದು (ಹೆರೊಡೋಟಸ್, ಥೂಕಿಡಿಡೀಸ್) ನೇರವಾದದ್ದು (ಲಿಸಿಯಾಸ್), ಅತ್ಯಲಂಕೃತವಾದದ್ದು (ಐಸೊಕ್ರೇಟಿಸ್)-ಎಂದು ಆತ ವಿಂಗಡಿಸಿದ್ದಾನೆ.
ಸಾದೃಶ್ಯ ವೈಷಮ್ಯಗಳನ್ನು ಕುರಿತು ವಿಶದಪಡಿಸುವಾಗ ಡಯೊನೀಸಿ ಯಸ್ ಮೊದ ಮೊದಲು ಕೇವಲ ಯಾಂತ್ರಿಕ ಲೆಕ್ಕಾಚಾರವೊ ಎನ್ನಿಸುವಂತೆ ಅಂಕಿ ಅಂಶಗಳನ್ನು ಪಟ್ಟಿಮಾಡುತ್ತಿದ್ದ ಕ್ರಮೇಣ ಇಂಥ ಗಣಿತ ವಿಧಾನ ರಸಾತ್ಮಕ ಸಾಹಿತ್ಯದ ವಿವರಣೆಗಾಗಲಿ ವಿಮರ್ಶೆಗಾಗಲಿ ಹೊಂದುವುದಿಲ್ಲ ವೆಂಬದನ್ನು ಮನಗಂಡು ಅದನ್ನು ಕೈಬಿಟ್ಟ. ಆದರೂ ತಕ್ಕಡಿಯಲ್ಲಿಟ್ಟು ತೂಗುವ ಮನೋಭಾವವನ್ನು ಪೂರ್ತಿ ಕಳೆದುಕೊಳ್ಳಲಿಲ್ಲ.

ವಿಮರ್ಶೆಯ ವಿಚಾರದಲ್ಲಿ ಡಯೊನೀಸಿಸ್ ಸರಿಯಾದ ನಿಲುವನ್ನು ತಾಳಿದ್ದ. ಎಷ್ಟು ದೊಡ್ಡ ಕವಿಯಾದರೂ ಅವನನ್ನು ಹೆದರಿಕೆಯಿಲ್ಲದೆ ಪರೀಕ್ಷಿಸತಕ್ಕದ್ದು; ಗುಣ ದೋಷಗಳನ್ನು ಎತ್ತಿ ತೋರಿಸತಕ್ಕದ್ದು. ಅಭಿರುಚಿ ಮೌಲ್ಯಮಾಪನಕ್ಕೆ ಬೇರು. ವಿಮರ್ಶಕ ತನ್ನ ಅನಿಸಿಕೆಯ ಮೇಲೇ ನಿಲ್ಲಬಾರದು; ಬೌದ್ಧಿಕ ವಿಚಕ್ಷಣತೆಯನ್ನೂ ಅವಲಂಬಿಸಬೇಕು-ಎಂದು ಹೇಳಿದ. ಹಾಗಾಗಿ ಪ್ರಾಚೀನ ಹಿರಿಯ ವಿಮರ್ಶಕರಲ್ಲಿ ಡಯೊನೀಸಿಯ ಉಲ್ಲೇಖಾರ್ಹನಾಗಿದ್ದಾನೆ.

ರೋಮನ್ ವಿಮರ್ಶಕರಲ್ಲಿ ಅತ್ಯಂತ ಪ್ರಖ್ಯಾತನಾದ ಹೊರೇಸ್ (ಕ್ರಿ.ಪೂ. 65-08). ಹೊಸಹುಟ್ಟಿನ ಅವಧಿಯಲ್ಲೂ ಆಮೇಲಣ ಎರಡು ಮೂರು ಶತಮಾನಗಳಲ್ಲೂ ಅವನ ಪ್ರಭಾವಕ್ಕೆ ಅನೇಕ ಸಾಹಿತಿಗಳು ಒಳಗಾಗಿದ್ದರು. ಇಂದಿಗೂ ಅವನ ಹತ್ತೆಂಟು ಉಕ್ತಿಗಳು ಕಾಂತಿ ಕಳೆದುಕೊಳ್ಳದೆ ಸಾರೋಕ್ತಿಗಳಾಗಿವೆ. ಮೀಕಿನಾಸ್, ಪೋಲಿಯೊ, ಮೆಸ್ಸಾಲರು ಆಶ್ರಯ ಕೊಡುತ್ತಿದ್ದ ಸಾಹಿತ್ಯಗೋಷ್ಠಿಗೆ ಹೊರೇಸ್ ಸೇರಿದ್ದ. ತನ್ನ ಕಾಲದ ಕವಿಗಳು ಸಾಹಿತ್ಯವನ್ನು ಪ್ರಾಚೀನ ಗ್ರೀಕರಿಗೆ ಸಮದಂಡಿಯಾಗುವಂತೆ ಪೋಷಿಸಬಲ್ಲ ರೆಂದು ಅವನು ಭರವಸೆ ಹೊಂದಿದ್ದ. ರೋಮಿನ ಪೂರ್ವಕವಿಗಳನ್ನು ಅತಿಶಯವಾಗಿ ಹೊಗಳುವವರನ್ನು ಆತ ಖಂಡಿಸುತ್ತಿದ್ದ. ಅಲೆಕ್ಸಾಂಡ್ರಿಯಾ ಪಂಥವನ್ನು ಅಟ್ಟಕ್ಕೇರಿಸುವ, ನಾಟುನುಡಿ ಶೋಕಗೀತೆ ಇತ್ಯಾದಿ ಕಿರುಕವನಗಳನ್ನು ಮೆಚ್ಚುವ ಆಧುನಿಕರನ್ನು ಕಂಡರೆ ಅವನಿಗೆ ತಿರಸ್ಕಾರ ಮತ್ತು ಆಗ್ರಹವಿತ್ತು.

ಕ್ರಿ.ಪೂ. 30ರಲ್ಲಿ ಹೊರೇಸನ ವಿಡಂಬನೆಗಳು ಪ್ರಕಟಗೊಂಡುವು. ಆಮೇಲೆ 7 ವರ್ಷ ಭಾವಗೀತೆಯಲ್ಲಿ ಆಸಕ್ತನಾಗಿದ್ದು ಕ್ರಿ.ಪೂ. 23ರಲ್ಲಿ ಪ್ರಗಾಥಗಳನ್ನು ಹೊರತಂದ. ಆದರೆ ಅವು ಓದುಗರ ಮನ್ನಣೆ ಪಡೆಯಲಿಲ್ಲ. ಪದ್ಯಕಾವ್ಯವನ್ನು ಪರಿತ್ಯಜಿಸಿ ಕುಶಲಪತ್ರ ಲೇಖನಕ್ಕೆ ಕೈಹಾಕಿದ. ಮೊದಲನೆಯ ಸಂಕಲನ ಕ್ರಿ.ಪೂ. 20ರಲ್ಲಿ ಪ್ರಕಾಶವಾಯ್ತು. ಎರಡನೆಯ ಸಂಕಲನದ ತಾರೀಖು ಖಚಿತವಾಗಿ ತಿಳಿದುಬಂದಿಲ್ಲ; ಅದರ ಮೂರು ಪತ್ರಗಳೂ ಸಾಹಿತ್ಯಕ್ಕೆ ಗುತ್ತಾಗಿ ಹೊಂದಿಕೊಂಡವು. ಮತ್ತೆ ಪದ್ಯಕಾವ್ಯ ರಚನೆಗೆ ಕೈಹಾಕಿ ಕ್ರಿ.ಪೂ. 17ರಲ್ಲಿ ಲೌಕಿಕ ಗೀತಗಳನ್ನೂ 14ರಲ್ಲಿ ಪ್ರಗಾಥಗಳ ನಾಲ್ಕನೆಯ ಸಂಪುಟವನ್ನೂ ಪ್ರಕಟಿಸಿದ. ವಿಡಂಬನೆ ಸಾಹಿತ್ಯ ಪ್ರಭೇದಗಳಲ್ಲಿ ಒಂದು ಎಂಬುದನ್ನು ಸಮರ್ಥಿಸಿ, ಆದರ ಮೊದಲಿಗನಾದ ಲ್ಯೂಸಿಲಿಯಸ್ಸನನ್ನು ನೆನೆದು, ಅವನನ್ನು ವಿಮರ್ಶಿಸಿದ್ದಾನೆ. ಲ್ಯೂಸಿಲಿಯಸ್ ಚತುರ, ವಿಚಕ್ಷಣೆಯುಳ್ಳವ, ಆದರೆ ಸೋಮಾರಿ. ಕವನ ಬರೆಯುವುದರಲ್ಲಿ ಅವನಿಗೆ ಅತಿ ಆತುರ. ಒಮ್ಮೆ ಕುಳಿತಂತೆ 200 ಪಂಕ್ತಿಗಳನ್ನು ಒಂದು ಘಂಟೆಯಲ್ಲಿ ಹೇಳಿ ಬರೆಯಿಸಿದ. ಆದ್ದರಿಂದ ಅವನ ಹೇಳಿಕೆಗಳು ಕಟು ಮತ್ತು ಕುರೂಪಿ; ಅಲ್ಲದೆ ಗ್ರೀಕ್ ಲ್ಯಾಟಿನ್ ಶಬ್ದಗಳನ್ನು ಬರೆಸುವುದು ಅವನ ಕೆಟ್ಟ ಚಾಳಿ ಎಂದು ಲೂಸಿಲಿಯಸ್ಸನನ್ನು ಟೀಕಿಸಿದ್ದಾನೆ. ತಾನು ಕವಿಯಲ್ಲವೆಂದು ಹೊರೇಸ್ ಒಪ್ಪಿಕೊಳ್ಳುತ್ತಾನೆ. ದಿನಚರಿಯ ಆಡುಮಾತಿಗೆ ಛಂದಸ್ಸನ್ನು ಹೊಂದಿಸಿದರೆ ಅದೆಂತು ಕವಿತ್ವವಾದೀತು ? ನಿರಪರಾಧಿ ವಿಡಂಬನಕಾರ ಅಂಜಬೇಕಾದ್ದಿಲ್ಲ. ತನ್ನ ಚಿತ್ತದಲ್ಲಿ ಮತ್ಸರವಿಲ್ಲ; ನುಡಿಯಲ್ಲಿ ಅಣಕವಿಲ್ಲ; ಸ್ನೇಹಿತರು ಓದಿ ಸಂತೋಷಪಡುವುದಕ್ಕಾಗಿ ತನ್ನ ಬರೆವಣಿಗೆ. ತನ್ನ ತಂದೆ ತನಗೆ ಮಂದಿಯ ಲೋಪದೋಷಗಳನ್ನು ಪರಿಗಣಿಸುವುದು ವಿದ್ಯಾಭ್ಯಾಸದ ಅಂಗವೆಂದು ಬೋಧಿಸಿದನೆಂದೂ ಯಾರನ್ನು ತಾನು ಅನುಸರಿಸಬೇಕೊ ಅವರ ಹೆಸರುಗಳನ್ನು ಸೂಚಿಸಿದನೆಂದೂ ತನ್ಮೂಲಕ ನ್ಯೂನತೆಗಳನ್ನು ಕೊಡವಿಕೊಂಡು, ಈಗ ಅವುಗಳನ್ನು ವಿನೋದಕ್ಕಾಗಿ ವರ್ಣಿಸುತ್ತಿದ್ದೇನೆಂದೂ ಹೊರೇಸ್ ಹೇಳುತ್ತಾನೆ. ಕಟುನಿಂದೆಗಿಂತ ಸೌಮ್ಯ ಪರಿಹಾಸ ಒಳ್ಳೆಯದು. ವಿಂಡಬನಕಾರ ಹಾಸ್ಯ ಮಾಡುವಾಗ ಗಾಂಭೀರ್ಯವನ್ನು ಮರೆಯಬಾರದು; ನಯವಿನಯಗೂಡಿದ ವಿಡಂಬನೆ ತೀಕ್ಷ್ಣವಾದಕ್ಕಿಂತ ಉತ್ತಮ ಹಾಗೂ ಫಲಕಾರಿ. ಡೊಂಕುಗಳನ್ನು ತಿದ್ದುವ ಉದ್ದೇಶ ವಿಡಂಬನಕಾರನಿಗೆ ಇರುವುದರಿಂದ ಅವನಿಂದ ಸಮಾಜಕ್ಕೆ ಏನೂ ಭೀತಿಯಿಲ್ಲ ಎಂದು ಅಭಿಪ್ರಾಯ ಪಟ್ಟಿದ್ದಾನೆ. ಕುಶಲಪತ್ರಗಳು ಅವನ ಪರಿಪಕ್ವ ಬರೆವಣಿಗೆ. 45ವರ್ಷವಯಸ್ಸಿನ ತಾನು ಪದ್ಯ ಬರೆಯುವುದು ಹಾಸ್ಯಾಸ್ಪದವೆಂದು ಉಚ್ಚರಿಸಿ, ಕಿರಿಯ ಕವಿಗಳಿಗೆ ನೀತಿಧರ್ಮ, ಕಾವ್ಯಧರ್ಮಗಳನ್ನು ಕುರಿತು ಬುದ್ಧಿವಾದ ಹೇಳುವುದು ತನ್ನ ಕರ್ತವ್ಯವೆನ್ನುತ್ತಾನೆ. ಯಾವ ಅತಿರೇಕಕ್ಕೂ ಹೋಗದೆ. ವಿಲಕ್ಷಣ ತತ್ತ್ವಗಳಿಗೆ ಮರುಳಾಗದೆ, ಶ್ರೇಷ್ಠ ಪ್ರಾಚೀನ ಹೆಲನಿಕ್ ಸಾಹಿತಿಗಳ ನಿರ್ದುಷ್ಟ ಮಾರ್ಗವನ್ನು ಸ್ವಂತಿಕೆಯನ್ನು ಬಿಡದೆ ಅನುಸರಿಸಿ ಅಪ್ಪಟ ರೋಮನ್ ನವ್ಯಕಾವ್ಯ ಮೂಡಿ ಬರುವಂತೆ ಮಾಡುವುದು ವಿದ್ಯಾವಂತರ ಜವಾಬ್ದಾರಿಯೆಂದು ಒತ್ತಿ ಹೇಳುತ್ತಾನೆ.
ಅವನ ಕುಶಲಪತ್ರಗಳಲ್ಲಿ ಪೀಸೋಗಳಿಗೆ ಕುಶಲಪತ್ರ (ಎಪಿಸ್ಟಲ್ ಟು ದಿ ಪೀಸೋಸ್) ಅತ್ಯಂತ ಮುಖ್ಯವಾದದ್ದು. ಕ್ವಿಂಟೆಲಿಯನ್ ಅದಕ್ಕೆ ಕಾವ್ಯ ಕಲೆ (ಆರ್ಸ್ ಪೊಯೆಟಿಕ) ಎಂದು ನಾಮಕರಣ ಮಾಡಿದ; ಆ ಹೆಸರಿನಿಂದಲೇ ಅದು ವಿಶೇಷ ಕೀರ್ತಿ ಪಡೆಯಿತು. ಯೂರೊಪಿನ ವಿಮರ್ಶೆಯಲ್ಲಿ ಬಹಳ ಕಾಲ ಅದೊಂದು ಪ್ರಸ್ಥಾನ ಗ್ರಂಥವಾಗಿತ್ತು; ಈಗಲೂ ಅದರ ಉಪಯೋಗ ಇದ್ದೇ ಇದೆ. ಅದರ ವಿಚಾರದಲ್ಲಿ ಕೆಲವು ಪ್ರಶ್ನೆಗಳು ಇನ್ನೂ ಸಮಸ್ಯೆಯಾಗಿನಿಂತಿವೆ. ಅದರ ಪ್ರಕಟಣೆ ಕಿ.್ರಪೂ. 15ರಲ್ಲೊ 10-8ರಲ್ಲೊ? ಈ ಪೀಸೊಗಳು ಯಾರು? ವರ್ಜಿಲನ ಹೆಸರನ್ನೇ ಹೊರೇಸ್ ಎತ್ತದಿರುವುದು ಏತಕ್ಕೆ ? ಕಲೆ ಎಂಬ ಅಭಿದಾನದ ಗ್ರಂಥ ಚಿಕ್ಕದಾಗಲಿ ದೊಡ್ಡದಾಗಲಿ ಅದರಲ್ಲಿ ಸಂವಿಧಾನ ಅಚ್ಚುಕಟ್ಟಾಗಿರ ಬೇಡವೆ? ಇತ್ಯಾದಿ. ಆದರೆ ಇಂಥ ವಿಚಾರಗಳೆಲ್ಲ ಕೃತಿಯಿಂದ ಹೊರಗಿನವು, ಕೃತಿಯ ಸತ್ವಕ್ಕೂ ತಿರುಳಿಗೂ ನೇರವಾಗಿ ಸಂಬಂಧಿಸಿ ದವಲ್ಲ. ಕ್ರಿ.ಪೂ. 1ನೆಯ ಶತಮಾನದ ಮಧ್ಯಭಾಗದಲ್ಲಿ ಅರಿಸ್ಟಾಟಲನ ಗ್ರಂಥಗಳು ಹಠಾತ್ತಾಗಿ ಪ್ರಚುರಕ್ಕೆ ಬಂದವು. ಅವುಗಳನ್ನು ಹೊರೇಸ್ ಓದಿದ್ದನೇ? ಅವನು ಎಲ್ಲಿಯೂ “ವಿರೇಚನೆ”, “ಅಲ್ಪ ದೋಷ”, “ಗುರ್ತು ಹಿಡಯುವಿಕೆ” ರೂಪಕಾಲಂಕಾರ ಮುಂತಾದ ಅರಿಸ್ಟಾಟಲನ ಪ್ರಿಯ ವಿಚಾರಗಳ ಮಾತನ್ನೇ ಆಡುವುದಿಲ್ಲ. ಕಾವ್ಯ ನಾಟಕಗಳ ವಿಚಾರವಾಗಿ ತಾನು ಕೇಳಿ ತಿಳಿದುಕೊಂಡಿದ್ದ ಮತ್ತು ಮಂಥನ ಮಾಡಿದ್ದ ಸಂಗತಿಗಳ ಆಧಾರದಿಂದ ಹೊರೇಸ್ ಈ ಪ್ರಬಂಧ ವನ್ನು ರಚಿಸಿದ ಎಂದೇ ನಾವು ಭಾವಿಸಬೇಕು. ಗದ್ಯವ್ಯಾಸಂಗಕ್ಕೆ ಸಿಸಿರೂ ಏನು ಸಹಾಯ ಮಾಡಿದನೊ ಅದನ್ನು ಹೊರೇಸ್ ಮಹಾಕಾವ್ಯ ನಾಟಕಗಳ ವ್ಯಾಸಂಗಕ್ಕೆ ಮಾಡಿದನೆನ್ನಬಹುದು.
ಕಾವ್ಯಕ್ಕೆ ಯುಕ್ತ ಸರಣಿಯೂ ಸರಳತೆಯೂ ಅಗತ್ಯ. ಚಿತ್ರಕಾರ ಸೊಂಟದವರೆಗೂ ರೂಪವತಿಯನ್ನು ರೇಖಿಸಿ ಕೆಳಗೆ ಮೀನಿನ ಕುರೂಪ ಬಾಲವನ್ನಿಟ್ಟರೆ ನಗೆಪಾಟಲಲ್ಲವೆ? ಕವಿಯಾವ ವೈಪರೀತ್ಯಕ್ಕೂ ಮನಗೊಡ ಬಾರದು. ತನ್ನ ಶಕ್ತಿ ಎಷ್ಟಿರುವುದೊ ಅಷ್ಟರಲ್ಲೇ ಹಾಳತಗೊಂಡಿರಬೇಕು. ಅಗತ್ಯ ಬಿದ್ದಾಗ ಹೊಸ ಶಬ್ದವನ್ನು ಕವಿ ನಿರ್ಮಿಸಬಹುದು. ಗಿಡಗಳು ವರ್ಷವರ್ಷವೂ ಹೊಸ ಎಲೆಗಳನ್ನು ತಳೆಯುವುದಿಲ್ಲವೇ? ಸವಕಲು ಶಬ್ದಗಳು ಸಾಯಲಿ, ನೂತನ ಶಬ್ದಗಳು ಉತ್ಪತ್ತಿಯಾಗಿಲಿ. ಮಹಾಕಾವ್ಯ ಎಲಿಜಿಯಾಕ್ ಶ್ಲೋಕ ನಾಟಕ ಭಾವಗೀತೆಯೆಂಬ ಪ್ರಭೇದಗಳಿಗೆ ಗೌರವ ಕೊಟ್ಟು ತಕ್ಕ ಛಂದಸ್ಸು ನುಡಿಗಟ್ಟು ಶೈಲಿಗಳನ್ನು ಹೊಂದಿಸತಕ್ಕದ್ದು. ಕವಿ ಓದುಗರಿಗೆ ಅಳುತರಲಿಚ್ಛಿಸಿದರೆ ತಾನೇ ಮೊದಲು ಅಳಬೇಕು. ಸಂಪ್ರದಾಯವನ್ನು ಹಿಂಬಾಲಿಸಬಹುದು; ಅಥವಾ ನವೀನತೆಗೆ ಆಶೆಪಟ್ಟರೆ ಹೊಂದಾಣಿಕೆಯನ್ನು ರೂಢಿಸಬೇಕು. ಬಾಲಕ, ಯುವಕ, ವೃದ್ಧರನ್ನು ಅವರವರ ವಯಸ್ಸಿಗೆ ಅನುಗುಣವಾಗಿ ಚಿತ್ರಿಸಬೇಕು. ನಾಟಕರಂಗದ ಮೇಲೆ ಕೆಲವನ್ನು ತೋರಿಸಬೇಕು, ಕೆಲವನ್ನು ವರದಿ ಹೇಳಬೆಕು. ಕೆಲವುಸೂತ್ರಗಳು ಅನುಲ್ಲಂಘನೀಯ: ನಾಟಕದ ಅಂಕಗಳು ಐದು; ದೇವತೆ ಮಧ್ಯೆ ಪ್ರವೇಶಿಸಕೂಡದು; ಕೋರಸ್ಸಿನ (ಮೇಳ) ವ್ಯವಸ್ಥೆ ಸರಿಯಾಗಿರಬೇಕು. ಛಂದಸ್ಸಿನ ಬಗೆಗೆ ಪ್ರಾಚೀನ ಗ್ರೀಕರನ್ನು ಅನುಸರಿಸತಕ್ಕದ್ದು; ಸ್ವಚ್ಛಂದ ರೋಮನ್ ದೊಂಬಿಯ ಕೀಳು ಅಭಿರುಚಿಗೆ ಇಳಿಯಬಾರದು. ಪ್ರತಿಭೆಯಿದ್ದರೇನು, ನಿಯಮಾವಳಿಯನ್ನು ಅಲಕ್ಷಿಸಲಾಗದು; ತಾನೇ ಕವಿಯಲ್ಲದಿದ್ದರೂ ಕವಿಗಳಿಗೆ ಸಲಹೆ ಕೊಡಬಹುದು. ಹೇಗೆಂದರೆ ಸಾಣಿಕಲ್ಲು ಕತ್ತರಿಸಲಾರದು, ಆದರೆ ಚೂರಿಯನ್ನು ಹರಿತಗೊಳಿಸುತ್ತದೆ. ಕವಿಗೆ ಹಲವು ವಿಧದ ಜ್ಞಾನ ಅವಶ್ಯಕ. ಹರ್ಷವೀಯುವುದೊ ತಿಳಿವಳಿಕೆ ಕಲಿಸುವುದೊ ಅಥವಾ ಎರಡನ್ನೂ ಜೊತೆಜೊತೆಯಾಗಿ ಮಾಡವುದೊ ಕವಿಗಳ ಉದ್ದೇಶ. ಕವಿ ತುಂಬ ಶ್ರಮ ವಹಿಸದಿದ್ದರೆ ಅವನ ಕಾವ್ಯ ನಿರರ್ಥಕ. ಸಾಧಾರಣತೆ ಯಾವಾಗಲೂ ಹೊಲ್ಲ. ಬರೆದದ್ದನ್ನು 9 ವರ್ಷ ಇರಿಸಿಕೊಂಡಿದ್ದು ಆಮೇಲೆ ಪ್ರಕಟಿಸಬೇಕು. ಹೊಗಳುಭಟ್ಟರ ಮಾತಿಗೆ ಕಿವಿಗೊಡದೆ ಸತ್ಯವನ್ನೇ ನುಡಿಯುವ ನೈಜ ಮಿತ್ರನಿಗೆ ತೋರಿಸಬೇಕು-ಹೀಗೆ ಹೊರೇಸ್ ವ್ಯಕ್ತಪಡಿಸಿರುವ ಅನೇಕ ಅಭಿಪ್ರಾಯಗಳು ಬೆಲೆಯುಳ್ಳವಾಗಿವೆ. 

“ಅಗಸ್ಟಸ್ಸನಿಗೆ ಕುಶಲಪತ್ರ-ಎಂಬ ಕೃತಿಯಲ್ಲಿಯೂ ಸ್ವಲ್ಪಮಟ್ಟಿನ ಸಾಹಿತ್ಯದ ಚರ್ಜೆ ಬಂದಿದೆ. ಹೊರೇಸನಿಗೆ ಅಗಸ್ಟಸ್ ಹೀಗೊಂದು ಪತ್ರ ಬರೆದನಂತೆ “ನಿನ್ನ ಮೇಲೆ ನನಗೆ ಕೋಪ. ನಿನ್ನ ಇಂಥ ಲೇಖನದಲ್ಲಿ ಎಲ್ಲೂ ನೀನು ನನ್ನೊಂದಿಗೆ ಸಂಭಾಷಿಸಿಲ್ಲ. ನನ್ನ ಗೆಳೆಯನಾದರೆ ಮುಂದಿನ ಪೀಳಿಗೆಯವರು ನಿನ್ನನ್ನು ಅವಮಾನಿಸುತ್ತಾರೆ ಎಂದು ನಿನಗೆ ಹೆದರಿಕೆಯೆ”? ಇದಕ್ಕೆ ಉತ್ತರವಾಗಿ ಚಕ್ರವರ್ತಿಗೆ ಹೊರೇಸ್ ಹೀಗೆ ಬಿನ್ನವಿಸಿದ: “ರೋಮ್ಯುಲಸ್, ಕ್ಯಾಸ್ಟರ್, ಪೊಲ್ಲಕ್ಸ್, ಹಕ್ರ್ಯುಲೀಸ್ ಮೊದಲಾದ ಪುರಾತನ ವೀರರು ತಮ್ಮನ್ನು ಜನ ಗುರುತಿಸಲಿಲ್ಲವೆಂದು ನೊಂದುಕೊಂಡರು. ಅಗಸ್ಟಸ್ಸಾದರೊ ಬದುಕಿರುವಾಗಲೇ ಮಾನ್ಯತೆ ಪಡೆದಿದ್ದವ. ಮಂದಿಯ ವರ್ತನೆ ಅವರ ಬುದ್ಧಿವಂತಿಕೆಯ ಕುರುಹು. ಹಿಂದಿನದನ್ನು ಮಾತ್ರ ಹೊಗಳಿ ಇಂದಿನದನ್ನು ತೆಗಳುವವರಿಗೆ ಏನೆನ್ನೊಣ? ವಿಚಾರಹೀನ ಪ್ರಶಂಸೆ ಕಂಡು ಬರುವುದು ಸಾಮಾನ್ಯರಲ್ಲೇ ಅಲ್ಲ; ಉತ್ತಮ ಮಟ್ಟದವರಲ್ಲೂ ಉಂಟು. ಒಬ್ಬ ಸತ್ತ ಮೇಲೆ ಎಷ್ಟು ಸಂವತ್ಸರ ಗತಿಸಬೇಕು ಅವನು ಪ್ರಾಚೀನನಾಗುವುದಕ್ಕೆ? ಒಂದು ಕಾವ್ಯವನ್ನು ಅದರಲ್ಲಿ ಗುಣವಿಲ್ಲವೆಂದು ಖಂಡಿಸದೆ ಇತ್ತೀಚಿನದೆಂದು ಖಂಡಿಸುತ್ತಾರೆ; ಅದರಿಂದ ನನಗೆ ಸಿಟ್ಟು. ಪುರಾತನ ಗ್ರೀಕರು ಶಾಂತಿಯಲ್ಲಿರುತ್ತ ಕಾವ್ಯದಿಂದಲೂ ಕ್ರೀಡೆಗಳಿಂದಲೂ ಆನಂದಗೊಳ್ಳುತ್ತಿ ದ್ದರು. ಈಚೆಗೆ ರೋಮ್ ಬದಲಾವಣೆಗೀಡಾಯ್ತು. ಪ್ರತಿಯೊಬ್ಬನಿಗೂ ಕಾವ್ಯ ಬರೆಯಬೇಕೆಂಬ ರೋಗ. ಕವಿಯ ಕೆಲಸ ವೈದ್ಯನ ಮತ್ತು ನಾವಿಕನ ಉದ್ಯೋಗದಂತೆ; ಅದಕ್ಕೂ ಶಿಕ್ಷಣ ದುಡಿಮೆ ಶ್ರದ್ಧೆ ಅವಶ್ಯಕ. ಕವಿ ಯೋಧನಲ್ಲ, ಆದರೂ ಅವನಿಂದ ಸಮಾಜಕ್ಕೆ ಹೇರಳ ಪ್ರಯೋಜನವುಂಟು. ಚಿಕ್ಕವರ ವಿದ್ಯಾಭ್ಯಾಸದಲ್ಲಿ ಅವನ ಪಾತ್ರ ಪ್ರಬಲ; ಆತ ಭಾಷೆ ಕಲಿಸುತ್ತಾನೆ, ನೀತಿ ಬೋಧಿಸುತ್ತಾನೆ, ದೈವಭಕ್ತಿ ಬೆಳೆಸಿ ಸ್ತೋತ್ರ ಹೇಳಿಕೊಡುತ್ತಾನೆ. ಹಿಂದಣ ಹಾಡುಗಳು ಮಧುರವಾಗಿದ್ದವು; ಆಮೇಲೆ ಮತ್ಸರ ಕಾಲಿಟ್ಟು ಕೇಡು ಮಾಡಿತು. ರೋಮ್ ಗ್ರೀಸನ್ನು ಜಯಿಸಿ ಗ್ರೀಸಿನಿಂದ ಸೋಲಿಸಲ್ಪಟ್ಟಿತು; ಕಲೆಗಳು ಬಂದುವು; ರೋಮನರಲ್ಲಿ ಸ್ವಲ್ಪ ಸುಧಾರಣೆಯಾಯಿತು. ಗ್ರೀಕರ ಟ್ರ್ಯಾಜಿಡಿಯ ಭಾಷಾಂತರ ಹೊರ ಬಂತು. ಕಾಮೆಡಿಯ ತರ್ಜುಮೆ ಹೆಚ್ಚು ಕಷ್ಟ; ಪ್ಲಾಟಸ್ಸನಲ್ಲಿ ಛಂದಸ್ಸಿನ ದೋಷಗಳಿವೆ. ಈಗ ನಾಟಕದ ಪ್ರೇಕ್ಷಕರು ರಭಸದವರಾಗಿದ್ದಾರೆ. ಓದುನಾಟಕಗಳಿಗೆ ಚಕ್ರವರ್ತಿ ಗಮನ ಕೊಡಬೇಕು. ಕವಿಗಳು ಅನೇಕ ವೇಳೆ ತೊಂದರೆ ಕೊಡುತ್ತಾರೆ; ಆದರೆ ಅಮರತ್ವವನ್ನು ತಂದುಕೊಡುವವರು ಅವರೇ. ಅಗಸ್ಟಸ್ ಅದೃಷ್ಟಶಾಲಿ: ಅವನ ಹತ್ತಿರ ವರ್ಜಿಲ್ ಮತ್ತು ವೇರಿಯಸ್ ಇದ್ದಾರೆ.”

ಅಗಸ್ಟಸ್‍ನ ಅನಂತರ: 14ರಲ್ಲಿ ಅಗಸ್ಟಸ್ ನಿಧನದ ಹೊತ್ತಿ ಗಾಗಲೇ ವರ್ಜಿಲ್, ಟೈಬ್ಯುಲಸ್, ಪ್ರಾಪರ್ಟಿಯಸ್, ಹೊರೇಸರು ಅಳಿದಿದ್ದರು; ಲಿವಿ 17ರಲ್ಲೂ ಓವಿಡ್ 18ರಲ್ಲೂ ಮಡಿದರು. ಸಾಹಿತ್ಯ ಜ್ಯೋತಿಗಳೆಲ್ಲ ಒಟ್ಟಿಗೆ ನಂದಿಹೋದುವು. ರೋಮಿಗೆ ಇಳಿಗತಿ ಧಾವಿಸಿ ಬಂದಂತೆ ತೋರಲಾರಂಭಿಸಿತು. ಅಗಸ್ಟಸ್ ಸಮಯದ ವೈಭವದ ಬಸಿರಿನಿಂದಲೇ ಅವನತಿ ಜನಿಸಿತೆನ್ನಬಹುದು. ಚಕ್ರಾಧಿಪತ್ಯದಲ್ಲಿ ಸಣ್ಣಪುಟ್ಟ ಗಲಭೆಗಳನ್ನುಳಿದು ಎಲ್ಲೆಲ್ಲೂ ಶಾಂತ ವಾತಾರವಣವಿತ್ತು. ಐಶ್ವರ್ಯ ಹೆಚ್ಚಾಗುತ್ತ ಬಂತು. ಸುಖಭೋಗ ಅಪೇಕ್ಷಿತವಾಗಿ ಅನುಭವ ಸಾಧ್ಯವಾಯ್ತು. ಸದ್ಗುಣ ನೀತಿ ಸಂಯಮಗಳು ಕುಸಿದುಬಿದ್ದುವು. ವ್ಯಕ್ತಿಸ್ವಾತಂತ್ರ್ಯಕ್ಕೆ ಕಡಿವಾಣ ಹಾಕಿದಂತಾಯ್ತು.

ಭಾಷಣಕಲೆಯ ಮೇಲೆ ತಕ್ಕುದಲ್ಲದ ಭಾರ ಬಿದ್ದು ಅದು ನಜ್ಜು ಗುಜ್ಜಾಗಿ ಸ್ವರೂಪ ಬದಲಾಯಿಸಿಕೊಂಡಿತು. ಬಹಿರಂಗಸಭೆ, ಮಂತ್ರಾಲೋಚನ ಸಭೆ ರದ್ದಾದುವು. ನ್ಯಾಯಾಲಯಗಳಲ್ಲಿ ಹಲವು ನ್ಯಾಯದರ್ಶಿಗಳ ಜಾಗದಲ್ಲಿ ಒಬ್ಬನೇ ನ್ಯಾಯಮೂರ್ತಿಯ ಆಧಿಪತ್ಯ. ಹೀಗಾಗಿ ಭಾಷಣ ವಿದ್ಯೆ ವಿದ್ಯಾಶಾಲೆಗಳಿಗೆ ಶರಣು ಹೊಕ್ಕಿತು. ಆ ವಿದ್ಯಮಾನದಿಂದ ಉಂಟಾದ ಅಸಹ್ಯ ಪರಿಣಾಮವನ್ನು ಹಿರಿಯ ಸೆನೆಕ (ಕ್ರಿ.ಪೂ. 57-ಕಿ.್ರಶ. 37) ತನ್ನ 10 ಸಂಪುಟದ ವಾದವಿವಾದದಲ್ಲೂ 2 ಸಂಪುಟದ ಪುಸಲಾವಣೆಯಲ್ಲೂ ಮೋಪಾಗಿ ವರ್ಣಿಸಿದ್ದಾನೆ. ಶಾಲೆಗಳಲ್ಲಿ ಆಟೋಪ ಭಾಷಣ ಎದ್ದು ಒಂದು ಭೂತಾಕಾರವಾಗಿ ಬೆಳೆಯಿತು. ಅದು ವಿದ್ಯಾರ್ಥಿಗಳ ಬರಿವಾಗ್ಬೇಸಾಯ; ಪ್ರದರ್ಶನಕ್ಕಾಗಿ, ಚಾತುರ್ಯ ಚಮತ್ಕಾರ ಪ್ರದರ್ಶನಕ್ಕಾಗಿ ಕ್ರಿಯಾಶೂನ್ಯ ಬಾಯಿ ವಿಜೃಂಭಣೆಗಾಗಿ. ಮಾತಿನ ಪ್ರದರ್ಶನಗಳು ವಿಪರೀತ ಆಕರ್ಷಕವಾದುವು. ವಿದ್ಯಾರ್ಥಿಗಳೇ ಅಲ್ಲದೆ ಅಧ್ಯಾಪಕರೂ ಕೂಡ ತಮ್ಮ ರಸನಾಸಾಮರ್ಥ್ಯ ಪ್ರಕಟಿಸುವುದಕ್ಕೆ ಹಾತೊರೆಯುತ್ತಿದ್ದರು. ಅಪಾಲೋಡೋರಸ್ ಥಿಯೊಡೋರಸ್ ಎಂಬ ಇಬ್ಬರು ಗುರುಗಳ ಪಂಥಗಳು ಏರ್ಪಟ್ಟು ಅವುಗಳ ನಡುವೆ ತೀಟೆ ತಿಕ್ಕಾಟ ತಾನೇ ತಾನಾಯ್ತು. ಅನೇಕರು ಪ್ರೇಕ್ಷಕರಾಗಿ ಕುಳಿತು ಉಲ್ಲಾಸ ಗೊಳ್ಳುತ್ತಿದ್ದರು. ಒಂದೊಂದು ಸಲ ಚಕ್ರವರ್ತಿಯೇ ಬಂದು ಆಲಿಸುತ್ತಿದ್ದ ನಂತೆ.

ಹಿರಿಯ ಸೆನೆಕ ಭಾಷಣ, ಲಲಿತಕಲೆ, ಶೈಲಿಗಳ ಮೇಲೆ ಉತ್ತಮ ಸಲಹೆಗಳನ್ನು ಕೊಟ್ಟಿದ್ದಾನೆ. “ಅಭಿರುಚಿ ಕೆಟ್ಟುಹೋಗಿರುವುದರಿಂದ ಬರೆವಣಿಗೆ ಕಲುಷಿತವಾಗಿದೆ; ಹಿಂದಿನ ಇಂದಿನ ಭಾಷಣಕಾರರೆಲ್ಲರನ್ನೂ ಪಠಿಸಬೇಕು; ಉತ್ಕøಷ್ಟಮೇಲ್ಪಂಕ್ತಿಯ ಚುನಾವಣೆಗಾಗಿ, ಚಮತ್ಕಾರದ ಅತಿರೇಕ ಹೊಲ್ಲ. ಏತಕ್ಕೆಂದರೆ ಅದು ಬಹಳ ಬಹಿರಂಗ, ಮುಚ್ಚಿಡು ವುದೂ ಒಂದು ಕಲೆ; ಸರಳತೆಯೂ ವಿವೇಕವೂ ಧ್ಯೇಯವಾಗಿರತಕ್ಕದ್ದು” ಅವನ `ಮಾದರಿಗಳು ಸ್ವಾರಸ್ಯಯುಕ್ತ ಸಂಕಲನ.

ಅವನು ಸಾಹಿತ್ಯದ ವಿಚಾರವಾಗಿ ಹೇಳಿರುವುದು ಮುಖ್ಯವಾಗಿ ಸಾರೋಕ್ತಿಗಳ ರೂಪದಲ್ಲಿದೆ. “ಒಬ್ಬ ಮನುಷ್ಯನ ಗುಣಶೀಲ ಎಂತೊ ಅವನ ಶೈಲಿ ಅಂತೆ; ಸಮಾಜದ ಕಾಲಮಾನಗಳೂ ಹಾಗೆಯೇ ಜನತೆಯ ಸುಗುಣ ದುರ್ಗುಣಗಳ ಪ್ರತಿಬಿಂಬ; ಎಷ್ಟು ದೊಡ್ಡ ಕವಿಯಾದರೂ ತಪ್ಪುಗಳಿಂದ ಪೂರ್ತಿ ವಿಮುಕ್ತನಲ್ಲ; ಶೈಲಿಗೆ ಶಾಶ್ವತ ನಿಬಂಧನೆಗಳಿಲ್ಲ, ಏತಕ್ಕೆಂದರೆ ಜನರ ವಾಡಿಕೆ ಮಾರ್ಪಟಾದಂತೆ ಅದಕ್ಕೂ ಮಾರ್ಪಾಟುಂಟು. ಒಬ್ಬ ಪ್ರಭಾವಶಾಲಿ ಶೈಲಿಯ ನಮೂನೆಯನ್ನು ರೂಪಿಸುತ್ತಾನೆ, ಇತರರು ಅವನನ್ನು ಹಿಂಬಲಿಸುತ್ತಾರೆ. ಹಿಂಬಾಲಕರು ಯಾವಾಗಲೂ ಉತ್ಪ್ರೇಕ್ಷೆಗೆ ಮನಸೋಲುತ್ತಾರೆ, ವಿಪರೀತವಾಗುವುದಕ್ಕೂ ಹೋಗದೆ ಮಿತವನ್ನು ಪಾಲಿಸುತ್ತ ನೈಸರ್ಗಿಕ ಜೀವನ ನಡೆಸುವುದೇ ಒಳ್ಳೆಯದು; ವಿಷಯ ಮುಖ್ಯವಾದದ್ದು, ಉತ್ತಮ ರೀತಿ ಸ್ವಾಭಾವಿಕವಾಗಿ ಬಂದರೆ ಬರಲಿ; ಶೈಲಿ ಆಲೋಚನೆಯ ಉಡುಪು; ಭಾಷಣಗೈಯುವಾಗ ತ್ವರೆಯೂ ಕೂಡದು ವಿಲಂಬವೂ ಕೂಡದು; ಯೂಲಿಸಿಸ್ಸನ ನಾವಿಕರೆಷ್ಟು, ಹೋಮರ್ ಹುಟ್ಟಿದ್ದೆಲ್ಲಿ ಮುಂತಾದ ಸಂಗತಿಗಳ ಸಂಶೋಧನೆ ಆಯಸ್ಸಿನ ಹಾಳು; ಕಾವ್ಯ ಆವೇಶವನ್ನು ಅವಲಂಬಿಸಿಕೊಂಡಿದೆ; ಬರೆವಣಿಗೆಯಲ್ಲಿ ಕೆಚ್ಚು ಆವಶ್ಯಕ; ಲೇಖಕನಿಗೆ ತುಂಬ ಗ್ರಂಥಜ್ಞಾನ ಬೇಕು”-ಇತ್ಯಾದಿ.
ನೀರೊ ಅವಧಿ ಮತ್ತು ನೀರೊ ತರವಾಯ: ನೀರೊ ಪಟ್ಟಕ್ಕೆ ಬಂದಾಗ (54) ಸಾಹಿತ್ಯಚಂದ್ರನನ್ನು ಮುಸುಕಿದ್ದ ಮೋಡಗಳು ಚದರಿದಂತೆ ಜನರಿಗೆ ತೋರಿತು. ದಾರ್ಶನಿಕನಾದ ಸೆನೆಕನಿಗೆ ನೀರೊ ಎರಡನೆಯ ಅಗಸ್ಟಸ್ ಆಗುತ್ತಾನೆಂಬ ಭರವಸೆಯಿತ್ತು. ಈ ಅವಧಿಯಲ್ಲಿ ಉತ್ತಮ ಲೇಖಕರು ಹುಟ್ಟಿಬಂದು ಒಳಿತಾಸೆಯನ್ನು ಸುಭದ್ರಗೊಳಿಸಿದರು; ಅವರು ವಿಮರ್ಶಕರೂ ಆಗಿದ್ದರು.
ಪರ್ಷಿಯಸ್‍ನ ವಿಡಂಬನಯ ಆರು ಸಂಪುಟಗಳಲ್ಲಿ ಕಾವ್ಯ ಭಾಷಣಗಳ ವಿಚಾರವಾಗಿ ಅವಹೇಳನ ಹೆಚ್ಚಾಗಿದೆ. ಹೆಚ್ಚು ಕಡಿಮೆ ಪೂರಾ ಖಂಡನೆಯೇ ಅವನ ವಿಮರ್ಶೆಯೆನ್ನಬಹುದು. ಅವನ ಮತದಂತೆ ಸ್ಪೂರ್ತಿ ಎಂಬುದು ಇಲ್ಲವೇ ಇಲ್ಲ; ದ್ರವ್ಯಲಾಭಕ್ಕಾಗಿಯೇ ಕವಿ ಬರೆಯು ತ್ತಾನೆ. ಕವಿ ತನ್ನ ಕಾವ್ಯವನ್ನು ಗುಂಪಿನ ಮುಂದೆ ವಾಚಿಸುವ ಪ್ರಕ್ರಿಯೆ ಯನ್ನು ಹೀಗೆ ಮನಮುಟ್ಟುವಂತೆ ಲೇವಡಿ ಮಾಡಿದ್ದಾನೆ. “ಷೋಕಿಯ ಬಟ್ಟೆಬರಿ ಹಾಕಿಕೊಂಡು, ಒಡವೆಗಳನ್ನು ಹೇರಿಕೊಂಡು, ವಯ್ಯಾರದಿಂದ ಬಂದು, ಬಾಯಿ ಮುಕ್ಕಳಿಸಿ, ಪದ್ಯಪಂಕ್ತಿಗಳನ್ನು ಗಟ್ಟಿಯಾಗಿ ಉಚ್ಚರಿಸುತ್ತ ಕಣ್ಣುಗಳನ್ನು ಅರಳಿಸಿ ತಿರುಹುತ್ತ, ಕೈಯಾಡಿಸಿ ಶ್ರೋತೃಗಳ ಕೈಚಪ್ಪಾಳೆ ಪಡೆಯುತ್ತಾನೆ; ಭೋಜನವೊ ಹಳೆದಾದ ವಸ್ತ್ರಗಳೊ ಅವನಿಗೆ ಬರುವ ಬಹುಮಾನ. ಎಲ್ಲವೂ ದೇಹಭಂಗಿಯ ತೋರ್ಕೆ, ನಟನೆ, ಸೋಗು. ಕಾವ್ಯ ಶೈಲಿಯೆಲ್ಲ ಕೃತಕತೆ ವಿಚಿತ್ರಾಲಂಕಾರ ಅಸ್ಪಷ್ಟತೆಗಳಿಗೆ ಮೀಸಲಾ ಗಿದೆ; ಭಾಷಣವೆಲ್ಲ ಕೇವಲ ವ್ಯರ್ಥಾಲಾಪ.

ಪೆಟ್ರೋನಿಯಸ್‍ನ ಸ್ಯಟಿರಿಕಾನ ಕಾದಂಬರಿಯಲ್ಲಿ ಕಾವ್ಯ ಮತ್ತು ಭಾಷಣ ಕಲೆಯ ಚರ್ಚೆ ಲವಲವಿಕೆಗೂಡಿ ವಿಹರಿಸುತ್ತದೆ. ಎನ್ಕೋಲ್ಪಿ ಯಸ್ ಎಂಬಾತ ಭಾಷಣವಿದ್ಯೆಯ ಉಪಾಧ್ಯಾಯನೊಬ್ಬ ಅಗಮೆಮ್ನಾನ ನನ್ನು ಕುರಿತು ಹೀಗೆ ಛೇಡಿಸುತ್ತಾನೆ: “ಶಾಲೆಗೆ ಹೋಗಿ ನಮ್ಮ ತರುಣರು ದಡ್ಡರಾಗುತ್ತಿದ್ದಾರೆ. ಬಾಳಿಗೆ ಅಗತ್ಯವಾದದ್ದನ್ನು ನೀವು ಹೇಳಿಕೊಡುವುದಿಲ್ಲ; ನೀವು ತೋರಿಸುವುದೇನು ? ಅವರಿಗೆ ಕಡಲ್ಗಳ್ಳರು ಕರೆಯಲ್ಲಿ ನಿಂತು ಬೀಗದಕೈ ಗೊಂಚಲನ್ನು ಆಡಿಸುವುದು, ಬಲಿಕೊಡಲು ಒಯ್ಯುತ್ತಿರುವ ಮೂವರು ಕನ್ಯೆಯರು ಇತ್ಯಾದಿ. ಮಾತ ಗಾರಿಕಯೆಲ್ಲ ಬರಿ ಆವಿ. ಕಾವ್ಯಕ್ಕೂ ಪತನ, ಚಿತ್ರಣಕ್ಕೂ ಪತನ”. ಇದಕ್ಕೆ ಜವಾಬಾಗಿ ಅಗಮೆಮ್ನಾನ್ ಹೀಗೆ ಹೇಳುತ್ತಾನೆ; “ತಂದೆತಾಯಿಯರ ತಪ್ಪು ಅದು. ತಮ್ಮ ಹುಡುಗರ ವಿದ್ಯಾಭ್ಯಾಸ ಬೇಗ ಆಗಬೇಕು, ಕ್ಷಿಪ್ರ ಫಲವನ್ನು ಕೊಡಬೇಕು ಎಂದು ಅವರ ತರಾತುರಿ. ನಿಧಾನವಾಗಿ ಚೆನ್ನಾಗಿ ಪಾಠ ಕಲಿಸುತ್ತೇನೆ ಎನ್ನುವ ಶಾಲೆಗೆ ವಿದ್ಯಾರ್ಥಿಗಳು ಬಾರರು, ಆ ಶಾಲೆಗೆ ದಿವಾಳಿತನ”. ಅನಂತರ ಒಬ್ಬ ಮುದುಕ ಕವಿ ಎನ್ಕೋಲಿಯಸ್ಸನ್ನು ಸಂಧಿಸಿ ಸಾಹಿತ್ಯದ ಅವಲಕ್ಷಣಗಳನ್ನು ವಿವರಿಸುತ್ತ ಕಾವ್ಯದ ನೈಜಸೂತ್ರವನ್ನು ಮುಂದಿಡುತ್ತಾನೆ: “ಕಾವ್ಯ ಚರಿತ್ರೆಯಲ್ಲ; ಅದರಲ್ಲಿ ಎಲ್ಲವೂ ಯಥಾರ್ಥ ಸತ್ಯವಾಗಿರಬೇಕಾದ್ದಿಲ್ಲ. ದೇವತೆಗಳಿಗೆ ಸ್ಥಾನಕೊಟ್ಟರೆ ಮಹಾಕಾವ್ಯಕ್ಕೆ ಏನೂ ಚ್ಯುತಿಯಿಲ್ಲ; ವರ್ಜಿಲ್ ಹಾಗೆ ಮಾಡಿದ. ಲ್ಯೂಕನ್ ಅದನ್ನು ತ್ಯಜಿಸಿ ಕೆಟ್ಟ. ಕವಿ ಸಾಧಾರಣತೆಯಿಂದ ಮೇಲೆಯೇ ಇರತಕ್ಕದ್ದು: ಎತ್ತರವನ್ನು ನಿಲುಕಿಸಿಕೊಳ್ಳುವ ಆತುರವೂ ಉತ್ಕಾಂಕ್ಷೆಯೂ ಆವೇಶವೂ ಅವನಿಗೆ ಸಹಜ ಇಂಥ ಮನವೊಪ್ಪಿಸಬಲ್ಲ ಹಲವು ತತ್ತ್ವಗಳು ಪೆಟ್ರೋನಿಯಸ್‍ನಲ್ಲಿ ಕಂಡುಬರುತ್ತವೆ.

ಕ್ವಿಂಟಿಲಿಯನ್ (ಸು.35-95) ವಕೀಲನಾಗಿಯೂ ಬೋಧಕನಾಗಿಯೂ ಕೀರ್ತಿಗಳಿಸಿ, ರಾಜ ಪ್ರಾಧ್ಯಾಪಕನಾಗಿ, ಚಕ್ರಿವರ್ತಿ ಡಾಮಿಷಿಯನ್ನನ ಮೊಮ್ಮಕ್ಕಳಿಗೆ ಪಾಠ ಹೇಳುವವನಾಗಿ, ರೋಮಿನ ಗಣ್ಯವ್ಯಕ್ತಿಗಳಲ್ಲಿ ಒಬ್ಬನೆನ್ನಿಸಿಕೊಂಡಿದ್ದ. 12 ಸಂಪುಟದ ಅವನ ವಾಗ್ಮಿಯ ವಿದ್ಯಾಭ್ಯಾಸ 93ರಲ್ಲಿ ಪ್ರಕಟವಾಯಿತು. ವಿಷಯವನ್ನು ಕೂಲಂಕಷವಾಗಿ ಪತ್ರಿಪಾದಿಸಿ ತಿಳಿಯೂ ಸಮಂಜಸವೂ ಆದ ಅಭಿಪ್ರಾಯಗಳನ್ನು ಅಧಿಕಾರಯುಕ್ತ ವಾಗಿಯೂ ನಿಸ್ಸಂದಿಗ್ಧವಾಗಿಯೂ ಹೇಳಿದ್ದಾನೆ. ಪುಸ್ತಕದ ರಚನೆಯ ಕ್ರಮ ಸಾಂಪ್ರದಾಯಿಕವಾದದ್ದು. ವಾಗ್ಮಿ ಕಲೆಗೆ ಪೂರ್ವಭಾವಿಯಾದ ಶಿಕ್ಷಣ, ವಾಗ್ಮಿಕಲೆಯ ಲಕ್ಷಣ, ಗುರಿ, ಭಾಷಣ; ಮುಖ್ಯವಾಗಿ ವಿಚಾರಾಂಶ ಗಳ ಕಂಡುಹಿಡಿಯುವಿಕೆ, ಅವುಗಳ ಸಕ್ರಮ ವ್ಯವಸ್ಥೆ; ಶೈಲಿ, ಜ್ಞಾಪಕಶಕ್ತಿ ಮತ್ತು ವಾಚನ ಪರಿಪೂರ್ಣವಾಗ್ಮಿ ಇತ್ಯಾದಿ ಸಂಗತಿಗಳು ಸ್ವಾರಸ್ಯಕರವಾಗಿ ನಿರೂಪಣೆ ಹೊಂದಿವೆ. ಅವನ ಗ್ರಂಥ ನೀರಸ ನಿಬಂಧವಲ್ಲ. ಹೇಳಿಕೆಗಳಿಗೆ ಚೈತನ್ಯತುಂಬಿ ಸುಟಿಯಾಗಿ ಅವು ಚಲಿಸು ವಂತೆ ಮಾಡಬಲ್ಲ ಕಲಾವಂತಿಕೆ ಕ್ವಿಂಟಲಿಯನ್‍ನಲ್ಲಿ ಕಂಡುಬರುತ್ತದೆ. ವಾಗ್ಮಿತೆಯ ಸಾಮಾನ್ಯ ಉಪಾಧ್ಯಾಯರು ಹೇಗೆ ಒಣನಿಯಮಗಳ ಗುಪ್ಪೆಗಳನ್ನು ಹಾಕಿ ಬೇರತರುತ್ತಾರೆ, ಇಲ್ಲ ಆಡಂಬರದ ಟೊಳ್ಳು ವಾಕ್ಯಗಳಿಂದ ದುಷ್ಟ ಭಾಷಣಕ್ಕೆ ಪ್ರಚೋದನೆ ಕೊಡುತ್ತಾರೆ ಎಂಬುದನ್ನು ಅವನ ಬಲ್ಲ. ಅವರು ಸಿದ್ಧಪಡಿಸಿಕೊಡುವ ಪಠ್ಯಪುಸ್ತಕಗಳು ಅತೀವ ಸೂಕ್ಷ್ಮತೆಯ ಸೋಗಿನಿಂದ ವಾಗ್ಮಿತೆಯ ಉದಾರಾಂಶಗಳನ್ನು ಕೊಂದು, ಜೀವರಸವನ್ನು ಹೊಡೆದೋಡಿಸಿ, ನಗ್ನ ಮೂಳೆಗಳನ್ನು ಮಾತ್ರ ಉಳಿಸುತ್ತವೆ ಎಂದಿದ್ದಾನೆ.

ಪ್ರಾಥಮಿಕ ಶಿಕ್ಷಣದ ವಿಚಾರವಾಗಿ ಕ್ವಿಂಟಿಲಿಯನ್ ಆಡಿರುವ ಮಾತು ಇಂದಿಗೂ ಸೊಗಡನ್ನು ಕಳೆದುಕೊಂಡಿಲ್ಲ. “ಪ್ರಾಥಮಿಕ ವಿದ್ಯಾಭ್ಯಾಸದ ವಿಷಯ ಭಾಷಣಕಲೆಯ ಅಧ್ಯಾಪಕನ ಗೌರವಕ್ಕೆ ಕುಂದು ತರಲಾರದು. ಭಾಷಾ ಪರಿಚಯ ಸ್ಪಷ್ಟವಾಗಿರಬೇಕಾದ್ದರಿಂದ ಬಾಲಕರಿಗೆ ಗೊತ್ತು ಮಾಡುವ ದಾದಿಯರೂ ಸೇವಕರೂ ಯೋಗ್ಯರಾಗಿರತಕ್ಕದ್ದು. ಮೊದಲು ಗ್ರೀಕನ್ನು ಕಲಿಸಿ ಆಮೇಲೆ ಗ್ರೀಕ್ ಲ್ಯಾಟಿನ್ ಎರಡನ್ನೂ ಹೇಳಿಕೊಡಬೇಕು. ಕಲಿಕೆ ಆಟದಂತಿರಬೇಕು, ಮೆಚ್ಚಿಕೆಯ ಬಹುಮಾನ ದಿಂದ ಕೂಡಿರಬೇಕು. ಮಕ್ಕಳನ್ನು ಹೊಡೆಯಬಾರದು; ದೇಹದಂಡನೆ ಗುಲಾಮರಿಗೆ ಯುಕ್ತ, ಅದರಿಂದ ಮೊಂಡುತನ ಹೆಚ್ಚಾಗುತ್ತದೆ. ತಪ್ಪಿಲ್ಲದ ಸ್ಪಷ್ಟ ಭಾಷೆಯನ್ನು ಕಲಿಸಬೇಕು, ತಪ್ಪಿಲ್ಲದ್ದು ಎಂದರೆ ಸಂಕುಚಿತಾರ್ಥದಲ್ಲಿ ಅಲ್ಲ. ಇಡೀ ಇಟಲಿಯ ಭಾಷೆಯೇ ಸರಿಯಾದ ಲ್ಯಾಟಿನ್. ಪ್ರಣಯ ಗೀತ, ಗೇಲಿಪದ್ಯ ಮುಂತಾದವನ್ನು ಬಾಲಕರಿಗೆ ಸಿಕ್ಕದಂತೆ ದೂರವಿಡತಕ್ಕದ್ದು; ಜವಾಬ್ದಾರಿ ಅರಿತುಕೊಳ್ಳುವ ತನಕ ಕಾಮೆಡಿ ಕೂಡ ಅವರಿಗೆ ಒಳ್ಳೆಯದಲ್ಲ. ಹಿಂದಿನ ಲ್ಯಾಟಿನ್ ಕವಿಗಳು ಪಠಿಸಲರ್ಹರಾದವರು. ಈಚಿನವರ ಭಾಷೆ ಲೋಲುಪ್ತಿಯ ಕೆಟ್ಟಗುಣಗಳಿಂದ ಕೆಳಗುರುಳಿದೆ. ಸಂಗೀತ ಗಣಿತಗಳ ವ್ಯಾಸಂಗ ಮುಖ್ಯ. ಅಂಗವ್ಯಾಯಾಮವೂ ಅಗತ್ಯ. ಮಕ್ಕಳಿಗೆ ಇದೆಲ್ಲ ಬಾರಿ ಹೊರೆ ಎಂದು ಆಕ್ಷೇಪಿಸಬಹುದು; ಆದರೆ ಭಾರ ಹೊರುವ ಸಾಮಥ್ರ್ಯ ಅವರಲ್ಲಿದೆ. ಕಲಿಯುವ ವಿಷಯಗಳ ವೈವಿಧ್ಯವೇ ಒಂದು ಬಗೆಯ ವಿಶ್ರಾಂತಿ, ವಿದ್ಯಾಭ್ಯಾಸದಲ್ಲಿ ಕೇವಲ ಧನಾರ್ಜನೆಗೆ ಜಾಗವೇ ಇಲ್ಲ.”

ಆಮೇಲೆ ವಾಗ್ಮಿತೆಯ ಶಾಲೆಗಳ ವಿದ್ಯಾಭ್ಯಾಸ. “ಗುರುಶಿಷ್ಯರಿಬ್ಬರೂ ಸಹಕರಿಸಬೇಕು. ಅತ್ಯುತ್ತಮ ಲೇಖನಗಳನ್ನೇ ಓದತಕ್ಕದ್ದು. ಆಧುನಿಕ ಬರೆಹಗಳ ಪ್ರಲೋಭನೆಗೆ ಈಡಾಗಬಾರದು. ಇತ್ತೀಚೆಗೆ ಎದ್ದುಬಂದಿರುವ ಆಟೋಪ ಭಾಷಣ ಉಪಯುಕ್ತವಾದ್ದು. ಆದರೆ ನ್ಯಾಯಾಲಯ ವಾಸ್ತವ ವಿಚಾರಣೆÂಗಳನ್ನೇ ಆರಿಸಿಕೊಳ್ಳಬೇಕು. ಕಾಲ್ಪನಿಕ ವ್ಯಕ್ತಿಗಳನ್ನಾಗಲಿ ಘೋರ ಘಟನೆಗಳನ್ನಾಗಲಿ ಬರಗೊಡಲಾಗದು. ಹಾಗೂ ಹುಚ್ಚುಹುಚ್ಚು ಆರ್ಭಟವನ್ನು ತ್ಯಜಿಸಬೇಕು. ಈ ಭಾಷಣ ವೈಪರೀತ್ಯಕ್ಕೆ ಈಗ ನಮ್ಮ ಮಧ್ಯ ಹಾವಳಿ ಮಾಡುತ್ತಿರುವ ರಭಸಹಿಂಸೆಯ ಉಪಾಸನೆಯೇ ಮೂಲ; ತೆರೆಯಲು ಸುಲಭವಾದ್ದನ್ನು ಒಡೆದು ತೆರೆಯುವುದು, ಬಿಚ್ಚಲು ಸುಲಭ ವಾದ್ದನ್ನು ಹರಿದು ಬಿಚ್ಚುವುದು. ಹಿಂದೆ ತೆಪ್ಪಗೆ ಬರುವುದನ್ನು ದರದರನೆ ಎಳೆಯುವುದು ಪರಿಸ್ಥಿತಿ ಹೀಗಿರುವಾಗ ಬಿರುಸಿನ ಚಂಡ ಭಾಷಣ ಪ್ರಿಯವಾಗದೆ ಮತ್ತೇನು? ಅದರ ದೋಷಗಳೆಲ್ಲ ಗುಣಗಳಾಗಿ ಕಾಣುತ್ತವೆ, ಅವಿದ್ಯಾವಂತರಿಗೆ, “ಬಯ್ಗುಳ ಭಾಷಣ ಸ್ವಾತಂತ್ರ್ಯದ ಗುರುತು, ಯಾವುದನ್ನೂ ಲೆಕ್ಕಿಸದ ಭಾಷಣದಲ್ಲಿ ಎದೆಗಾರಿಕೆಯಿದೆ, ಸಡಿಲ ಭಾಷಣ ಪುಷ್ಕಳತೆಯ ಪರಿಣಾಮ” ಎಂದು ಭಾಷಣಕಲೆಯನ್ನು ಕುರಿತು ಅಭಿಪ್ರಾಯಪಟ್ಟಿದ್ದಾನೆ.

ಶೈಲಿಯನ್ನು ಕುರಿತು ಕೂಡ  ಆತ ದೀರ್ಘವಾಗಿ ಪ್ರಸ್ತಾವಿಸಿದ್ದಾನೆ. ಶೈಲಿಯ ಬಗೆಗೆ ಎಚ್ಚರಿಕೆ ಇರಬೇಕು, ವಿಷಯಗಳ ಬಗೆಗೆ ತೀವ್ರಾಸಕ್ತಿ ಇರಬೇಕು ಎಂದು ಹೇಳಿ ಗುಣಗಳು ದೋಷಗಳು ಪದಗಳು ಪದಗಳ ಒಪ್ಪ ಓರಣ ಛಂದಸ್ಸು ಮುಂತಾದ ಸಾಂಪ್ರದಾಯಿಕ ವಿಚಾರಗಳನ್ನು ಚರ್ಚೆ ಮಾಡಿದ್ದಾನೆ. ಓದಬೇಕಾದ ಗ್ರೀಕ್ ಮತ್ತು ಲ್ಯಾಟಿನ್ ಪುಸ್ತಕಗಳನ್ನು ಪಟ್ಟಿಮಾಡಿದ್ದಾನೆ. ಹೋಲಿಕೆ ವ್ಯತ್ಯಾಸಗಳನ್ನು ಮುಂದಿಟ್ಟಿದ್ದಾನೆ. ಇನ್ನೂ ಅನೇಕ ವಿಷಯಗಳನ್ನು ತರ್ಕಸಮ್ಮತವಾಗಿ ವಿವರಿಸಿದ್ದಾನೆ. ಅವನ ಒಟ್ಟು ಅಭಿಪ್ರಾಯವಿದು: “ಕಡ್ಡಾಯವಾದ ನಿಯಮಗಳಿಲ್ಲ, ಪಠ್ಯಪುಸ್ತಕದವರು ಎಷ್ಟೇ ಜಂಬ ಕೊಚ್ಚಿದರೂ ಸ್ವಂತ ಬುದ್ಧಿಯಿಂದ ಪ್ರತಿಯೊಬ್ಬನೂ ಉಚಿತಾನುಚಿತವನ್ನು ನಿಷ್ಕರ್ಷಿಸತಕ್ಕದ್ದು. ಸರಿಯಾದ ದಾರಿಯನ್ನು ತೋರಿಸುವುದಾದರೆ ನಿಯಮಗಳಿಂದ ಸಹಾಯ, ಹಳ್ಳಬಿದ್ದ ಜಾಡಿನಲ್ಲಿಯೇ ನಮ್ಮನ್ನಿಡುವುದಾದರೆ ಅವು ಅಪ್ರಯೋಜಕ”.

ಕ್ವಿಂಟಿಲಿಯನ್ ತರುವಾಯದ ಅವಧಿ: ಕ್ವಿಂಟಿಲಿಯನ್ನನ ಪ್ರಭಾವ 2ನೆಯ ಶತಮಾನದ ಆದಿಭಾಗದಲ್ಲಿ ಬಲವತ್ತರವಾಗಿಯೇ ಇತ್ತು. ಅವನು ಶಿಫಾರಸು ಮಾಡಿದ ಶಿಷ್ಟಮಾರ್ಗ ಹಲವು ಯೋಚನಾಪರರಿಗೆ ಯೋಗ್ಯವಾದದ್ದೆಂದು ತೋರಿಬಂತು. ಎರಡೆಯ ಪ್ಲೀನಿ ಮಾರ್ಷಲ್ ಸ್ಯೂಟೋನಿಯಸ್, ಜುವೆನೆಲ್ ಮೊದಲಾದವರು ಅದನ್ನು ಪರಿಪೋಷಿಸಿ ದರು; ಆದರೆ ಅವರು ಅರ್ವಾಚೀನರನ್ನು ಅವನಷ್ಟು ಉಗ್ರವಾಗಿ ಖಂಡಿಸಲಿಲ್ಲ. ಅವರಾದ ಮೇಲೆ ಕ್ವಿಂಟಿಲಿಯನ್ನನ ಪ್ರಭಾವ ಕಡಮೆಯಾಯ್ತು. ಆರ್ಷೇಯತ್, ದ್ವಿತೀಯ ಸೋಫಿಸ್ಟಿಕ್ ಇತ್ಯಾದಿ ಪಂಥಗಳು ಹುಟ್ಟಿಕೊಂಡವು.

ಎರಡನೆಯ ಪ್ಲೀನಿ ಸಾಹಿತ್ಯ ವಿಲಾಸಿ, ಆದರೆ ಬದ್ಧ ವಿಮರ್ಶಕನಲ್ಲ. ಅವನ ಸುತ್ತ ಒಂದು ಸಾಹಿತ್ಯಕ ಗೋಷ್ಠಿಯಿತ್ತು. ಅಲ್ಲಿ ಒಬ್ಬೊಬ್ಬರ ಲೇಖನಗಳನ್ನು ನಿಷ್ಪಕ್ಷಪಾತವಾಗಿ ಪರಿಶೀಲಿಸಿ ತಿದ್ದಿಕೊಳ್ಳುತ್ತಿದ್ದರು. ಸಾಹಿತ್ಯದ ವಿಷಯವಾಗಿ ಅವನಿಗೆ ಯಾವ ಸಿದ್ಧಾಂತವೂ ಇರಲಿಲ್ಲ; ಸಾಹಿತಿಗಳ ಮೇಲೆ ಒಟ್ಟಿನಲ್ಲಿ ಶ್ಲಾಘಿಸುವ ಬಗೆಯಲ್ಲೇ ಅಭಿಪ್ರಾಯ ಹೊರಗೆಡಹಿದ್ದಾನೆ. ಪ್ರಾಚೀನರನ್ನು ಕುರಿತು ಮೆಚ್ಚಿಕೆ ಇದ್ದರೂ ಅವನಿಗೆ ಅರ್ವಾಚೀನರ ಬಗ್ಗೆ ತಾತ್ಸಾರವಿರಲಿಲ್ಲ. ಮಾರ್ಷಲ್ ಪ್ರತಿಭಾವಂತ, ಟ್ಯಾಸಿಟಸ್ಸನ ಚರಿತ್ರೆ ಅಮರಕಾವ್ಯ, ಸೀಲಿಯಸ್ ಇಟಾಲಿಕನ್ ಉತ್ತಮ ಕವಿ” ಮುಂತಾಗಿ ಹೊಗಳಿದ್ದಾನೆ. ಪ್ರಾಚೀನರ ಸೂತ್ರಗಳನ್ನು ಅಕ್ಷರಶಃ ತೆಗೆದುಕೊಳ್ಳದೆ ಅನುಬಂಧದೊಡನೆ ಸ್ವೀಕರಿಸುವುದು ಒಳ್ಳೆಯದೆಂಬುದು ಅವನ ಅಭಿಮತ. ಸಂಕ್ಷಿಪ್ತತೆ ಅಗತ್ಯ, ದಿಟ; ಆದರೆ ಪೆರಿಕ್ಲೀಸ್‍ನಲ್ಲಿ ವಿಪುಲತೆ ರಮ್ಯವಾಗಿಲ್ಲವೆ? ಮಧ್ಯಮ ಮಾರ್ಗ ಒಳ್ಳೆಯದು, ದಿಟ; ಆದರೆ ಅಪಾಯಕ್ಕಂಜದೆ ಬಲಿಷ್ಠ ಭಾಷೆಯನ್ನು ಬಳಸಿದರೆ ತಾನೆ ಭವ್ಯ ಶೈಲಿ ಸಾಧ್ಯ? ವಾಗ್ಮಿಗಾಗಲಿ ಲೇಖಕನಿಗಾಗಲಿ ಅಲಂಕಾರ ಓಜಸ್ಸು ರಂಗು ಬೇಕೇ ಬೇಕು; ಅವುಗಳನ್ನು ಸಾಧಿಸಲು ಅವನಿಗೆ ಸ್ವಾತಂತ್ರ್ಯ ಅಗತ್ಯ. ಕಾವ್ಯವನ್ನು ಅದು ಯಾವ ಪ್ರಭೇದದ್ದು, ಅದರ ಗುಣಗಳಾವುವು ಎಂದೇ ಪರೀಕ್ಷಿಸತಕ್ಕದ್ದು; ಅಸಂಬದ್ಧ ಸಂಗತಿಗಳಿಗೆ ಮನಗೊಡಲಾಗದು ಎಂದು ಅಭಿಪ್ರಾಯಪಡುತ್ತಾನೆ. 

ಆದರೆ ಮಾರ್ಷಲ್ ಹಿಂದಿನವರನ್ನು ಅನುಕರಿಸಬೇಕೆಂಬ ಉಪದೇಶಕ್ಕೆ ನೇರ ವಿರೋಧಿ. ಅವನ ಸಲಹೆಯಂತೆ, ಕವಿ ತನ್ನ ಕಾಲದ ಸುತ್ತುಮುತ್ತಣ ಜೀವನವನ್ನು ಅವಲೋಕಿಸಿ ಕೃತಿ ರಚಿಸತಕ್ಕದ್ದು. ತನ್ನ ನಾಟುನುಡಿ ನಿತ್ಯಬಾಳಿನ ಸೀದಾ ಚಿತ್ರಣವೆಂದು ಅವನಿಗೆ ಹೆಮ್ಮೆ; ಭವ್ಯಕಾವ್ಯವಾದರೊ ಜೇಡಿಮಣ್ಣಿನ ದೈತ್ಯ; ಆತ ನಾಟುನುಡಿಯ ಸಮರ್ಥನೆಯನ್ನು ಆವೇಶದಿಂದ ಮಾಡಿದ್ದಾನೆ.

ಜುವೆನೆಲನು ಪೌರಾಣಿಕ ಹುಳುಕ ಮಾಲನ್ನು ಆಚೆಗೆಸೆಯಿರಿ ಎಂದು ಹೇಳಿದ; ಜನರ ಆಗುಹೋಗುಗಳು ಸುಖ ದು:ಖ ಮುಂತಾದವು ಕಾವ್ಯಕ್ಕೆ ಸರಿಯಾದ ವಿಷಯ ಎಂದು ಸಾರಿದ. ಆತ ತನ್ನ ಕಾಲದ ದುರಾಚಾರ ಲಂಪಟತನಗಳನ್ನು ಕಟುವಾಗಿ ಖಂಡಿಸಿದ್ದಾನೆ.

ಕ್ವಿಂಟಿಲಿಯನ್ನನ ಶಿಷ್ಟಮಾರ್ಗವನ್ನು ಸ್ಯೂಟೋನಿಯಸ್ ಶ್ರದ್ಧಾಸಕ್ತಿ ಯಿಂದ ಅನುಮೋದಿಸಿದ. ಮಾರ್ಕಸ್ ಆಂಟೊನಿಯಸ್ಸನ ಸಾಲಂಕೃತ ವಾಚಾಳತ್ವ ಅವನಿಗೆ ಹಿಡಿಸಲಿಲ್ಲ; ಟೈಬೀರಿಯಸ್ಸನ ಗೂಢ ಶಬ್ದಾನ್ವೇಷ ಣೆಯೂ ಸಲ್ಲದೆಂದು ತೋರಿಬಂತು; ಅಗಸ್ಟಸ್ಸನ ಎಚ್ಚರಿಕೆಯ ಮಧ್ಯಮ ಶೈಲಿಯೇ ಸೊಗಸೆಂದು ಅವನು ಭಾವಿಸಿದ. “ಅಗಸ್ಟಸ್ಸನಿಗೆ ಅರ್ಥವನ್ನು ಸುಲಭವಾಗಿಯೂ ಸ್ಪಷ್ಟವಾಗಿಯೂ ಹೊರಗೆಡಹುವುದೇ ಆಕಾಂಕ್ಷೆ: ಅಂಥ ಮಾತುಗಾರಿಕೆಯೇ ಶ್ರೇಷ್ಠ ಮತ್ತು ಪವಿತ್ರ. ಅದಕ್ಕೆ ದೇವಮಾನವ ಅಗಸ್ಟಸ್ಸನ ಆಶೀರ್ವಾದವಿದೆ-ಎಂಬುದು ಸ್ಯೂಟೋನಿಯಸ್ಸನ ಮತ.
ಪ್ಲೂಟಾರ್ಕನ ನೀತಿಪ್ರಬಂಧಗಳಲ್ಲಿ ಚಿಕ್ಕವರು ಕಾವ್ಯವನ್ನು ಹೇಗೆ ಪಠಿಸಬೇಕು ಎಂಬುದೂ ಒಂದು. “ಸಂತೋಷ ಭಾವೋತ್ಕರ್ಷಕ್ಕಿಂತ ಕಾವ್ಯದ ಕಥಾವಸ್ತುವೂ ಅದರ ಪ್ರಭಾವವೂ ಮುಖ್ಯವಾದದ್ದು. ಜೀವನ ವನ್ನು ಪ್ರತಿಬಿಂಬಿಸುವುದರಿಂದ ಕಾವ್ಯದಲ್ಲಿ ಕೆಟ್ಟದಕ್ಕೂ ಸ್ಥಾನ ಇದ್ದೇ ಇರುತ್ತದೆ. ಕವಿ ಕೆಟ್ಟದ್ದನ್ನು ಹಳಿದು ಅದಕ್ಕೆ ಸೋಲೇ ಉಂಟಾಗುವಂತೆ ನಿಯಂತ್ರಿಸುತ್ತಾನೆ; ಆದ್ದರಿಂದ ಓದುಗರ ಮೇಲೆ ದುಷ್ಪರಿಣಾಮ ಬೀಳುವುದಿಲ್ಲ. ಅನ್ಯಾರ್ಥ ವ್ಯಂಗ್ಯಾರ್ಥ ಮುಂತಾದವುಗಳನ್ನು ದೂರವಿಟ್ಟು ನೇರ ತಾತ್ಪರ್ಯವನ್ನೇ ಸ್ವೀಕರಿಸಬೇಕು. ಸಾರೋಕ್ತಿಗಳೂ ಆದರಣೀಯ ಎಂದಿದ್ದಾನೆ. ಆದರೆ ಪ್ಲೂಟಾರ್ಕ್ ಶುದ್ಧ ವಿಮರ್ಶಕನಲ್ಲ; ಅವನು ಅರಿಸ್ಟೊಫೇನಿಸನ ಗುಣಗಳನ್ನು ಕಾಣಲಾರದೇ ಹೋದ.

ಟ್ಯಾಸಿಟಸ್‍ನ ವಾಗ್ಮಿಗಳನ್ನು ಕುರಿತ ಸಂವಾದದಲ್ಲಿ ನಾವು ಅರಿತು ಕೊಳ್ಳಬೇಕಾದ ಹಲವು ವಿದ್ಯಮಾನಗಳಪೂರ್ಣ ವಿವರಣೆ ಸಿಗುತ್ತದೆ. ಆ ಸಂವಾದ 74-75ರಲ್ಲಿ ದಿಟವಾಗಿ ನಡೆಯಿತೆಂದು ಟ್ಯಾಸಿಟಸ್ ತಿಳಿಸುತ್ತಾನೆ. ಆಗ ಅವನು 20 ವರ್ಷದ ಯುವಕನಾಗಿದ್ದನಂತೆ. ಟ್ರ್ಯಾಜಿಕ್ ಕವಿಯೂ ಭಾಷಣಕಾರನೂ ಆದ ಮ್ಯಾಟರ್ನಸ್ ಎಂಬಾತನ ಗೃಹವೇ ಸಂವಾದ ನಡೆದ ಸ್ಥಳ. ಭಾಗವಹಿಸಿದ್ದವರು ಟ್ಯಾಸಿಟಸ್, ಜೂಲಿಯಸ್, ಸೆಕಂಡಸ್, ಆಪರ್ ಮತ್ತು ಮೆಸ್ಸಾಲ. ಟ್ಯಾಸಿಟಸ್ ಮೂಕ ಪ್ರೇಕ್ಷಕ. ಮ್ಯಾಟರ್ನಸ್ ವಕೀಲಿಯನ್ನು ಬಿಟ್ಟದ್ದು ತಪ್ಪೆಂದು  ಆಪರ್ ಆಕ್ಷೇಪಿಸುತ್ತಾನೆ. “ವಾಗ್ಮಿತೆ ನಾನಾ ಫಲಗಳನ್ನು ಕೊಡುತ್ತದೆ; ಕಾವ್ಯದ ಪ್ರಯೋಜನ ಬಹಳ ಕಡಿಮೆ. ಕಾವ್ಯ ಕವಿಯನ್ನು ತೊಂದರೆಗೆ ಸಿಕ್ಕಿಸಬಹುದು; ಆಗ ಭಾಷಣವೇ ಉದ್ಧಾರ ಮಾಡಬೇಕು. ಗ್ರೀಕರಿಗೆ ಕಾವ್ಯರಚನೆ ಸಮ, ರೋಮನರಿಗೆ ಬೇರೆ ಕೆಲಸಗಳಿವೆ ಎನ್ನುತ್ತಾನೆ. ಮ್ಯಾಟರ್ನಸ್‍ಗಾದರೊ ರಕ್ತಸಿಕ್ತ ವಾಗ್ಝರಿ ತ್ಯಾಜ್ಯ, ಕಾವ್ಯದ ಆದ್ಯ ವಾಕ್ಸಂಪತ್ತೇ ಸತ್ಕಾರಯೋಗ್ಯ; ಕವಿಗೆ ಹೆಸರೂ ಮರ್ಯಾದೆಯೂ ಬರುತ್ತವೆ; ಅಷ್ಟೇ ಸಾಕು.” ಆಗ ಆಗಮಿಸಿದ ಮೆಸ್ಸಾಲ ಆಪರ್‍ನನ್ನು ಅಭಿನಂದಿಸುತ್ತಾನೆ. ಕಾರಣ ಶಾಲೆಗಳ ವಾದ-ವಿವಾದದಲ್ಲಿ ಅವನಿಗೆ ಇನ್ನೂ ಆಸಕ್ತಿ ಇರುವುದಕ್ಕಾಗಿ, ಹಳೆಯದಕ್ಕಿಂತ ಹೊಸದನ್ನು ಅವನು ಮೆಚ್ಚಿರುವುದಕ್ಕಾಗಿ. ಆಪರ್ ತಕ್ಷಣ ಪ್ರತಿವಾದ ಪ್ರಾರಂಭಿಸುತ್ತಾನೆ. “ಪ್ರಾಚೀನ ಎಂಬ ಪದ ತಬ್ಬಿಬ್ಬು ಮಾಡುತ್ತದೆ; ಸಿಸಿರೊ ಎಷ್ಟು ಹಿಂದಿನವನು? ಭಾಷಣ ಬದಲಾಯಿಸುತ್ತಲೇ ಹೋಗುತ್ತದೆ; ಹೋಗ ಬೇಕು. ಆಗಿರುವ ಬದಲಾವಣೆ ಒಳ್ಳೆಯದೆ. ಸುದೀರ್ಘಭಾಷಣಕ್ಕೆ ಈಗಿನ ಸಮಯ ಆಸ್ಪದವೀಯದು. ಕ್ಷಿಪ್ರಚಲನೆಯ ವಾದಗಳು, ರಂಗು ರಂಗಿನ ಚತುರೋಕ್ತಿಗಳು, ಉಜ್ಜ್ವಲ ಶಬ್ದ ಚಿತ್ರಗಳು-ಇವು ಚಟುಲನಾ ಜೂಕಿನ ಜಡ್ಜಿಗಳಿಗೆ ಬೇಕು. ನೋಟಕರ ಬುದ್ಧಿಯೂ ಸೂಕ್ಷ್ಮವಾಗಿದೆ. ಸಿಸಿರೊ ತನ್ನ ಕಾಲದಲ್ಲಿ ಆಧುನಿಕನೆಂದೇ ಪರಿಗಣಿತನಾಗಿದ್ದ; ಈಗ ಅವನಿಗೆ ಪ್ರಾಚೀನನೆಂಬ ವರ್ಣನೆ. ಅವನ ನುಡಿಗಟ್ಟು ಕೆಲವರಿಗೆ ಇಷ್ಟವಾದರೂ ಅನೇಕರಿಗೆ ತುಕ್ಕುಹಿಡಿದ ವಸ್ತುವಿನಂತೆ ಅಹಿತ” ಎಂದು ತನ್ನ ಅಭಿಪ್ರಾಯ ವ್ಯಕ್ತಪಡಿಸುತ್ತಾನೆ. ಆಗ ಮೆಸ್ಸಾಲನು ಭಾಷಣ ವೈಖರಿ ಕಾಲಕಾಲಕ್ಕೆ ವ್ಯತ್ಯಾಸಗೊಳ್ಳದೆ ಯತ್ನವಿಲ್ಲ ಎಂದು ಒಪ್ಪಿಕೊಂಡು ಇತ್ತೀಚಿನ ರೀತಿಯನ್ನು ದೂಷಿಸುತ್ತಾನೆ. ಭಾಷಣಕ್ಕೆ ಗರತಿಯ ಸಾಮಾನ್ಯ ಉಡುಪನ್ನು ತೊಡಿಸುವುದು ಲೇಸು, ವೇಶ್ಯೆಯ ಆಭರಣಗಳ ಗೋಜು ಬೇಡ. ಭಾಷಣಕಾರರು ಭಾಷಣವನ್ನು ಹಾಡುತ್ತಾರೆ, ಕುಣಿಯುತ್ತಾರೆ ಎಂದು ಟೀಕಿಸಿದ್ದಾನೆ. ವಾಗ್ಮಿತೆಯ ಇಳಿಗತಿಗೆ ಕಾರಣವೇನು ಎಂದು ಮ್ಯಾಟರ್ನಸ್ ಕೇಳಿದಾಗ ಮೆಸ್ಸಾಲನ ಉತ್ತರ ವಿದ್ಯಾಭ್ಯಾಸ ಕೆಟ್ಟುಹೋಗಿದೆ; ಬಾಲಕರಿಗೆ ಆಲಸ್ಯ, ಅಧ್ಯಾಪಕರು ಜ್ಞಾನಿಗಳಲ್ಲ, ತಂದೆತಾಯಿಗಳಿಗೆ ಉದಾಸೀನ ಎಂದು ಮೆಸ್ಸಾಲ ಉತ್ತರಿಸುತ್ತಾನೆ. ಯುದ್ಧವಿದ್ದರೆ ಉತ್ತಮ ಯೋಧರು ಎದ್ದುಬರುವಂತೆ ಪ್ರಜಾಪ್ರಭುತ್ವದ ಪರಸ್ಪರ ಹೋರಾಟಗಳಲ್ಲೇ ಪ್ರಸಿದ್ಧ ವಾಗ್ಮಿಗಳಿಗೆ ಅವಕಾಶ. ಆದರೆ ಜಗಳವೂ ಅಶಾಂತಿಯೂ ಯಾರಿಗೆ ಬೇಕು? ಸಮರ್ಪಕ ಆಡಳಿತದ ಸ್ಪಾರ್ಟಾ ಕ್ರೀಟ್‍ಗಳಲ್ಲಿ ಯಾವ ಶ್ರೇಷ್ಠ ಭಾಷಣಕಾರ ಆಗಿಬಂದ ಎಂದು ಕಡೆಯಲ್ಲಿ ಮ್ಯಾಟರ್ನಸ್ ತೀರ್ಪು ನುಡಿಯುತ್ತಾನೆ. ಅಲ್ಲಿಗೆ ಅವನ ಸಂವಾದ ಕೊನೆಗೊಳ್ಳುತ್ತದೆ.

ಲಾಂಜೀನಸ್ ಬರೆದದ್ದೆಂದು ನಂಬಲಾಗಿರುವ ಮಹೋನ್ನತಿಯನ್ನು ಕುರಿತು-ಎಂಬ ಕಿರುಪುಸ್ತಕ ವಿಮರ್ಶಾ ಪ್ರಪಂಚದ ಮೇರುಕೃತಿಗಳಲ್ಲೊಂ ದೆಂದು ಖ್ಯಾತವಾಗಿದೆ. ಆದರೆ ಈ ಗ್ರಂಥದ ಮೂರನೆಯ ಒಂದು ಭಾಗ ನಷ್ಟವಾಗಿದೆ. ಲೇಖಕರು ಅತ್ಯುನ್ನತಿಯನ್ನು ಹೇಗೆ ಮುಟ್ಟುತ್ತಾರೆ ಎಂಬುದರ ವಿವರಣೆಯೂ ಚರ್ಚೆಯೂ ಇದರಲ್ಲಿ ನಿರೂಪಣೆಗೊಂಡಿದೆ. ಲಾಂಜೈನಸ್‍ಗೂ ಮುನ್ನ ಕಲಾಕ್ಟ್ ಎಂಬಲ್ಲಿಯ ಸಿಸಿಲಿಯಸ್ ಇದೇ ವಿಷಯವನ್ನು ಕುರಿತು “ಹತ್ತು ಅಟ್ಟಿಕ್ ವಾಗ್ಮಿಗಳು” ಎಂಬ ಉದ್ಗ್ರಂಥ ವನ್ನು ಬರೆದಿದ್ದನಂತೆ. ಆದರೆ ಅವನ ಬರೆಹದ ಉತ್ತಮ ಭಾಗಗಳು ಕೂಡ ಈಗ ಉಪಲಬ್ಧವಿಲ್ಲ. ಸಿಸಿಲಿಯಸ್‍ನ ಹೇಳಿಕೆಗಳು ಅಸಮರ್ಪಕ ವೂ ಅಸಮಗ್ರವೂ ಆಗಿದ್ದುದರಿಂದ ಮನನೊಂದು ಲಾಂಜೀನಸ್ ತನ್ನ ಕೃತಿಗೆ ಕೈಹಾಕಿದನಂತೆ.

ಕೃತಿಯ ಪ್ರಾರಂಭ ವಾಕ್ಯಗಳಲ್ಲೇ ಲಾಂಜೀನಸ್ ತನ್ನ ಮೇಲ್ಮಟ್ಟವನ್ನು ಪ್ರದರ್ಶಿಸಿ ಬೆರಗಾಗಿಸುತ್ತಾನೆ: ಮಹೋನ್ನತ ಬರೆಹದ್ದು ಮನವೊಪ್ಪಿಸುವ ಕೆಲಸವಲ್ಲ; ಪರವಶತೆಗೆ ಈಡಾಗಿಸುವುದು. ಕಾವ್ಯದ ಇತರ ಲಕ್ಷಣಗಳು ಕ್ರಮಕ್ರಮವಾಗಿ ಗೋಚರಿಸುತ್ತವೆ; ಮಹೋನ್ನತಿಯಾದರೊ ಸಿಡಿಲಿನಂತೆ ಹಠಾತ್ತಾಗಿ ಬಿದ್ದು ಕವಿಯ ಪೂರ್ಣ ಸಾಮಥ್ರ್ಯವನ್ನು ತಕ್ಷಣ ಬೆಳಗುತ್ತದೆ. ಅದು ಎಲ್ಲರಿಂದಲೂ ಎಲ್ಲ ಕಾಲದಲ್ಲೂ ಮೆಚ್ಚಿಗೆ ಪಡೆಯುತ್ತದೆ. ಔನ್ನತ್ಯ ಕವಿಯ ಹುಟ್ಟುಗುಣ ದಿಟ, ಪ್ರಕೃತಿ ಅಗತ್ಯ ಘಟಕಾಂಶಗಳನ್ನು ಒದಗಿಸುತ್ತದೆ. ಆದರೆ ಅವುಗಳ ಯುಕ್ತ ನಿಯಂತ್ರಣಕ್ಕೆ ಶಿಕ್ಷಣವೂ ಜ್ಞಾನವೂ ಬೇಕು. ಮೇಲಕ್ಕೇರಲಾರದ ಕವಿ ಅತಿಬಯಕೆಯಿಂದ ಪ್ರಯತ್ನಿಸಿ ಆಡಂಬರ, ಟೊಳ್ಳು, ಅಪ್ರಕೃತ ಆವೇಶ, ಜಡತ್ವ ಮೊದಲಾದ ದೋಷಗಳಿಗೆ ಇಳಿಯುತ್ತಾನೆ. ಸಮರ್ಥ ಅಭಿಪ್ರಾಯ, ಬಲಿಷ್ಠ ಭಾವೋದ್ರೇಕ, ಸೂಕ್ತ ಅಲಂಕಾರಗಳು, ಶ್ರೀಮಂತ ಶಬ್ದರಾಶಿ, ಗಂಭೀರ ವಚನವ್ಯವಸ್ಥೆ-ಇವು ಔನ್ನತ್ಯಕ್ಕೆ ಆಧಾರವಾದ ಐದು ಅಂಶಗಳು. ಘನಾಲೋಚನೆಯಿಂದ ಕವಿಯ ಮನಸ್ಸು ತುಂಬಿದ್ದಲ್ಲಿ ಶ್ರೇಷ್ಠ ಬರೆವಣಿಗೆ ಸಾಧ್ಯವಾಗುತ್ತದೆ. ದೊಡ್ಡ ಮಾದರಿಯನ್ನು ಕವಿಗಳು ತಮ್ಮ ಮುಂದಿಟ್ಟುಕೊಳ್ಳುವುದು ಬಹಳ ಉಪಯುಕ್ತವೆಂದಿದ್ದಾನೆ. ಕಾವ್ಯಾಲಂಕಾರಗಳ ಚರ್ಚೆ ನಡೆಸಿ, ಲಾಂಜೀನಸ್ ಪದಗಳನ್ನು ಗಮನಿಸುತ್ತಾನೆ. ಸುಂದರ ಶಬ್ದಗಳು ದಿಟವಾಗಿ ಮನಸ್ಸಿಗೆ ವಿಶಿಷ್ಟ ದೀವಟಿಗೆ ಎನ್ನುತ್ತಾನೆ. ನಂತರ ದೋಷಗಳ ಪ್ರಸ್ತಾಪವನ್ನೆತ್ತಿ ಹೀಗೆ ಹೇಳಿದ್ದಾನೆ: ನೀನು ಹೋಮರ್ ಆಗುತ್ತೀಯೊ ಅಪೊಲೋನಿಯಸ್ ಆಗುತ್ತೀಯೊ ಸಾಫೊಕ್ಲೀ ಸೊ ಅಯಾನನೊ ಡೆಮಾಸ್ತನೀಸೊ ಹೈಪರೈಡೀಸೊ? ಆ ಭವ್ಯ ಕವಿಗಳಲ್ಲಿ ಒಬ್ಬೊಬ್ಬರೂ ತಮ್ಮ ಸಕಲ ತಪ್ಪುಗಳಿಗೂ ಒಂದೊಂದು ಮಹೋತ್ತಮ ವಾಕ್ಯದಿಂದಲೇ ಪರಿಹಾರ ಸಲ್ಲಿಸಿದ್ದಾರೆ. ದೋಷರಹಿತ ಸಾಧಾರಣತೆಗಿಂತ ದೋಷಯುಕ್ತ ಪ್ರತಿಭೆ ಅಪೇಕ್ಷಿತ ಎಂದು ಅಭಿಪ್ರಾಯ ಪಡುತ್ತಾನೆ. ಅವನ ಅಭಿಪ್ರಾಯಗಳು ಇಂದಿಗೂ ಮನನೀಯವಾಗಿವೆ.

ದ್ವಿತೀಯ ಸೊಫಿಸ್ಟಿಕ್: ಫ್ಲೇವಿಯನ್ ಪೀಳಿಗೆ ಚಕ್ರಾಧಿಪತ್ಯಕ್ಕೆ ಬಂದ ಅನಂತರ, ಎಂದರೆ ಕ್ರಿ.ಶ. 70ರಿಂದ ಮುಂದಕ್ಕೆ, ಆಗಲೇ ಸೌಭಾಗ್ಯಸ್ಥಿತಿಗೆ ಏರಿದ್ದ ಏಷ್ಯಮೈನರ್ ಪಟ್ಟಣಗಳು ಇನ್ನೂ ಹೆಚ್ಚು ವರ್ಧಿಸಿದವು. ಎಫೀಸಸ್, ಆಂಟಿಯೋಕ್, ಸ್ಮರ್ನ, ಪರ್ಗಮಮ್ ಈ ನಗರಗಳು ವಾಣಿಜ್ಯದಲ್ಲೂ ಸಂಸ್ಕøತಿಯಲ್ಲೂ ಚಿತ್ತಸೆಳೆಯುವ ಮತ್ತು ಆಸೆ ತಣಿಸುವ ಕೇಂದ್ರಗಳಾದವು. ಈ ಕೇಂದ್ರಗಳಲ್ಲಿ ಕ್ರೀಡೆಗಳೂ ಉತ್ಸವಗಳೂ ವಿಶೇಷ ಉತ್ಸಾಹದಿಂದ ಜರುಗುತ್ತಿದ್ದುವು. ಸಂಚಾರಿ ಪಂಡಿತರಿಗೆ ದ್ರವ್ಯಕೊಟ್ಟು ಅವರಿಂದ ಭಾಷಣ ಮಾಡಿಸುವ ಏರ್ಪಾಡು ಪ್ರಬಲವಾಯ್ತು. ಪ್ರದರ್ಶನ ಭಾಷಣ ಎಲ್ಲರಿಗೂ ಬೇಕಾಯ್ತು. ಬಲು ಹಿಂದೆ ಎಂದರೆ ಕ್ರಿ.ಪೂ. 5 ಮತ್ತು 4ನೆಯ ಶತಮಾನದಲ್ಲಿ ಗ್ರೀಕರು ಅಭ್ಯಸಿಸುತ್ತಿದ್ದ ಆ ಪದ್ಧತಿ  1ನೆಯ ಶತಮಾನದ ರೋಮನ್ ಚಕ್ರಾಧಿಪತ್ಯದಲ್ಲಿ, ಮುಖ್ಯವಾಗಿ ಏಷ್ಯ ಪ್ರಾಂತ್ಯದಲ್ಲಿ, ದ್ವಿತೀಯ ಸೊಫಿಸ್ಟಿಕ್ ಎಂಬ ಹೆಸರಿನಿಂದ ಪ್ರಚುರಗೊಂಡಿತು. ರೋಮಿನ ಮೇಲಧಿಕಾರಿಯೊ ಚಕ್ರವರ್ತಿಯೊ ನಗರಕ್ಕೆ ಭೇಟಿಯಿತ್ತಾಗ ಅವನನ್ನು ಸತ್ಕರಿಸುವುದಕ್ಕೆ ಪ್ರಶಂಸಾ ಭಾಷಣ ಆಗಲೇಬೇಕಾಗಿತ್ತು. ಉಳಿದ ಸಂದರ್ಭದಲ್ಲಿ ಆಸಕ್ತ ಮಂದಿ ಅದೊ ಇದೊ ವಿಷಯದ ಮೇಲೆ ಮಾತನಾಡು ಎಂದು ಸೊಫಿಸ್ಟರನ್ನು ಕೇಳಿಕೊಳ್ಳುತ್ತಿದ್ದರು. ಕೆಲವು ಪಂಡಿತರು ತಮ್ಮ ಆಶುಭಾಷಣ ಕೌಶಲ್ಯದಿಂದ ಗರ್ವಿತರಾಗಿರುತ್ತಿದ್ದರು. ಎರಡನೆಯ ಶತಮಾನದ ಕೊನೆಯ ಹೊತ್ತಿಗೆ ನಿಪುಣ ಭಾಷಣಕಾರರಿಗೆ ಸ್ವಾಗತ, ಶ್ರೋತೃವರ್ಗ, ಸಂಭಾವನೆ ಎಲ್ಲಿ ಹೋದರೂ ಸಿದ್ಧವಾಗಿರುತ್ತಿತ್ತು. ಅವರನ್ನು ಮರಿಗ್ರೀಕರು ಎಂದು ಕೆಲವರು ಅಪಹಾಸ್ಯಮಾಡಿದರೂ ಅವರ ಗೌರವಕ್ಕೂ ಪ್ರಭಾವಕ್ಕೂ ಚ್ಯುತಿ ಉಂಟಾಗಲಿಲ್ಲ. ಶ್ರೀಮಂತಕುಲದ ಯುವಕರೂ ಪಂಡಿತರಾಗಿ ವಾಗ್ಮಿತೆಯ ಮೂಲಕ ಊರೂರುಗಳಲ್ಲಿ ದಿಗ್ವಿಜಯ ಸಾಧಿಸಲು ಹಾತೊರೆಯಲಾರಂಭಿಸಿದರು. 230ರಲ್ಲಿ ಹೊರಬಂದ ಒಂದು ಪುಸ್ತಕದಲ್ಲಿ 50 ಮಂದಿ ಪ್ರಮುಖ ಸೊಫಿಸ್ಟರ ಜೀವನ ಚರಿತ್ರೆಯಿದೆ.
ಸೊಫಿಸ್ಟರಿಗೆ ನಿರ್ಮಲ ಅಟ್ಟಿಕ್ ವಿಧಾನ ಧ್ಯೇಯವಾಗಿದ್ದುದೇನೋ ದಿಟ; ಆದರೆ ಕೇಳುಗರನ್ನು ಚಕಿತಗೊಳಿಸುವ ಅಭಿಲಾಷೆ ಅವರಲ್ಲಿ ಇದ್ದುದರಿಂದ ಅವರು ಅಪರೂಪ ಶಬ್ದಗಳು, ಪದಬಂಧಗಳು, ಅಲಂಕಾರಗಳು ಮುಂತಾದವನ್ನು ಬಳಸಿಕೊಳ್ಳುತ್ತ ಏಷ್ಯಾಟಿಕ್ ವಿಧಾನದ ಅನುಯಾಯಿಗಳೂ ಆದರು. ಹಲವರು ಎರಡನ್ನೂ ಸಂಕರಗೊಳಿಸಿ ಮೂರನೆಯ ವಿಧಾನವನ್ನು ಹೊರತಂದರು. ಆದರೆ ಅವರಲ್ಲಿ ಪ್ರತಿಭಾಶಾಲಿಗಳಿದ್ದುದು ಬಹಳ ಕಡಿಮೆ ಮಂದಿ.

ಡಯೊ ಕಾಕ್ಸಿಯಾನಸ್ (40-120) ಈ ಪಂಥದ ಪ್ರಸಿದ್ಧ ಪುರುಷನಾ ಗಿದ್ದ. ಅವನಿಗೆ ಕ್ರೈಸಾಸ್ಟಮೊಸ್ (ಹೊನ್ನು ನುಡಿಯವ) ಎಂಬ ಬಿರುದು ಬಂದಿತ್ತು. ಮೊದಲು ವಾಗ್ಮಿತೆಯಲ್ಲಿ ತುಂಬ ಆಸಕ್ತಿ ವಹಿಸಿ ಹೆಸರು ಗಳಿಸಿ, ಆಮೇಲೆ ತತ್ತ್ವಶಾಸ್ತ್ರಕ್ಕೆ ಮನಸೋತ. ಅವನ 80 ಭಾಷಣಗಳನ್ನು ವಾಗ್ವಿದ್ಯೆಗೆ ಸಂಬಂಧಪಟ್ಟವು, ತತ್ವಶಾಸ್ತ್ರಕ್ಕೆ ಸಂಬಂಧಪಟ್ಟವು ಎಂದು ಎರಡು ಗುಂಪಾಗಿಸಬಹುದು. ಆತ ಹೋಮರನ ಇಲಿಯಡ್ ಕಾವ್ಯವನ್ನು ಅಬದ್ಧ ಅತಾರ್ಕಿಕ ನಂಬಲನರ್ಹವೆಂದು ಛಿದ್ರಾನ್ವೇಷಣೆ ಎಸಗಿದ್ದಾನೆ. ವಿದೇಶೀಯ ಪ್ಯಾರಿಸ್ಸನೊಡನೆ ರಾಣಿ ಹೆಲನ್ ಪಲಾಯನಗೈಯುತ್ತಾಳೆಯೆ? ಮರದ ಕುದುರೆಯೊಳಗೆ ಅಷ್ಟೊಂದು ಮಂದಿ ಆಯುಧಪಾಣಿವೀರರು ಅಡುಗುವುದೆಂತು? ಅದು ಗುಟ್ಟಾಗಿರುವುದೆಂತು? ಟ್ರೋಜನರ ನಡುವೆ ಒಬ್ಬ ಮಂತ್ರಗಾತಿ ಇದ್ದಾಗ? ಇದೆಲ್ಲ ಪ್ರದರ್ಶನಕ್ಕಾಗಿ ನಡೆಸಿದ ಅತಿಬುದ್ಧಿವಂತಿಕೆ, ಬರಿ ಹುಡುಗಾಟ ಎಂದು ಕಾವ್ಯವನ್ನು ಟೀಕಿಸಿದ್ದಾನೆ.

ಆದರೆ ಆತ ತನ್ನ ಇನ್ನೊಂದು ಭಾಷಣದಲ್ಲಿ ಶಿಲ್ಪಕಲೆ ಕಾವ್ಯಕಲೆ ಗಳನ್ನು ಕುರಿತು ನಡೆಸಿರುವ ವಿಚಾರಣೆ ಅನುಪಮವಾದದ್ದು. ದೇವತೆ ಗಳನ್ನು ಮಾನವರಂತೆ ನಿರ್ಮಿಸಿದ್ದಕ್ಕಾಗಿ ಫೀಡಿಯಸ್ಸನ ಮೇಲೆ ಆರೋಪ ಬಂದಾಗ ಆತ ಈ ರೀತಿ ಜವಾಬುಕೊಟ್ಟನಂತೆ: “ಮನಸ್ಸು, ಬುದ್ಧಿ ಮುಂತಾದವನ್ನು ಶಿಲ್ಪ ನೇರವಾಗಿ ಚಿತ್ರಿಸಲಾರದು; ಸೌಂದರ್ಯ, ಗಾಂಭೀರ್ಯ, ಮೇಧಾವಿತನ, ವೈಭವಗಳಲ್ಲಿ ಮನುಷ್ಯ ವಿಶಿಷ್ಟನಾಗಿರುವು ದರಿಂದ ಅವನ ರೂಪದಲ್ಲಿ ಶಿಲ್ಪ ದೇವತೆಗಳನ್ನು ಸಂಕೇತಿಸುತ್ತಾನೆ. ಅದು ಸಾಂಪ್ರದಾಯಕವಾಗಿ ಹೋಮರನಿಂದ ಬಂದಿದೆ. ಭಾಷೆಗೆ ಹೇರಳ ಶಕ್ತಿಯಿದೆ; ನಾನಾ ಬಗೆಯ ಪದಗಳಿಂದ ಅದು ಸುಪುಷ್ಟ;  ಅಮೂರ್ತ ಅಭಿಪ್ರಾಯಗಳಿಗೆಲ್ಲ ತಕ್ಕ ನುಡಿಗಳಿವೆ. ಆದರೆ ಶಿಲ್ಪಿ ವಿಷಯದ ಒಂದು ಮುಹೂರ್ತ, ಒಂದು ತೋರ್ಕೆಗೆ ಸೀಮಿತನಾಗ ಬೇಕು; ಕವಿ ಒಂದರಿಂದ ಮತ್ತೊಂದಕ್ಕೆ ಸುಳಿಯಬಲ್ಲ. ಕಣ್ಣು ಕಿವಿಗಳು ಬೇಡುವುದು ಬೇರೆ ಬೇರೆ. ಆದರೂ ನಾನು ದೇವದೇವನನ್ನು ಸಂರಕ್ಷಕ, ಧನದಾನಿ, ನ್ಯಾಯಪರಿಪಾಲಕನಾಗಿ ತೋರಿಸಿದ್ದೇನೆ.”

ಡಯೋ ತನ್ನ ಇನ್ನೊಂದು ಭಾಷಣದಲ್ಲಿ, ತಾರುಣ್ಯದಲ್ಲಿ ವಿದ್ಯಾರ್ಜನೆ ಮಾಡದೇ ಹೋದ ಮಧ್ಯ ವಯಸ್ಕನಿಗೆ ವಾಗ್ಮಿಕಲೆಯನ್ನು ಬೋಧಿಸು ತ್ತಾನೆ. “ನಾಲ್ವರು ಗ್ರೀಕ್ ವಾಗ್ಮಿಗಳನ್ನು ಮೇಲ್ಪಂಕ್ತಿಯಾಗಿಟ್ಟುಕೊಳ್ಳಬೇಕು, ಮಿನಾಂಡರ್, ಯೂರಿಪಿಡೀಸ್, ಹೋಮರರನ್ನು ಪಠಿಸಬೇಕು. ಚರಿತ್ರೆಗಳ ಮೂಲಕ ಜ್ಞಾನ ಸಂಪಾದಿಸಬೇಕು; ಕ್ಸೆನೊಫನ್ ಅತ್ಯಗತ್ಯ. ಹೇಳಿ ಬರೆಯಿಸುವುದು ಫಲದಾಯಕ ಅಭ್ಯಾಸ” ಎಂದು ಅಭಿಪ್ರಾಯಪಟ್ಟಿದ್ದಾನೆ. ಮಗದೊಂದರಲ್ಲಿ, ಫಿಲೊಕ್ಟಿಟೀಸ್ ಉಪಾಖ್ಯಾನವನ್ನು ತೆಗೆದುಕೊಂಡು ಈಸ್ಕಿಲಸ್, ಸಾಫೊಕ್ಲೀಸ್, ಯೂರಿಪಿಡೀಸ್ ಬರೆದಿರುವ ನಾಟಕಗಳನ್ನು ವಿಶದವಾಗಿ ಹೋಲಿಸಿ, ವೈಷಮ್ಯಗಳನ್ನು ತೋರಿಸಿ, ವಿಚಕ್ಷಣೆಯಿಂದ ತೀರ್ಪು ಹೇಳಿ, ಸ್ವವಿಷಯಿಕ ಟೀಕೆಗಳನ್ನು ಮರೆಮಾಚದೆ, ಅತ್ಯುತ್ಕøಷ್ಟ ವಿಮರ್ಶೆಯನ್ನು ನೀಡಿದ್ದಾನೆ. ಆ ವಿಮರ್ಶೆ ತುಂಬ ಬೆಲೆಯುಳ್ಳದ್ದಾಗಿದೆ. 
ಹೆರೋಡೀಸ್ ಅಟ್ಟಿಕಸ್ (100-175) ಅಥೆನ್ಸಿನಲ್ಲಿ ಶಾಲೆ ನಡೆಸಿ ಧನವಂತನೂ ಪ್ರಭಾವಶಾಲಿಯೂ ಆದ ವ್ಯಕ್ತಿ. ಅವನ ಶಿಷ್ಯರಿಗೆ ಸಿಕ್ಕಿದ ಶ್ರೇಷ್ಠ ಗ್ರಂಥಗಳ ಪಠನವೂ ಸಾಹಿತ್ಯದರ್ಶನಗಳಲ್ಲಿ ಶಿಕ್ಷಣವೂ ಮಹತ್ತ್ವದ್ದು. ಬಲಿಷ್ಠ ವಾಗ್ಮಿಯಾಗಿಯೂ ಆತ ಜನಸಂದೋಹಗಳನ್ನು ಮೆಚ್ಚಿಸುತ್ತಿದ್ದ. ಅರಿಸ್ಟೈಡೀಸ್, ಹೆರೋಡೀಸ್ ಅಟ್ಟಿಕಸ್ಸನ ಶಿಷ್ಯರಲ್ಲಿ ಒಬ್ಬ. ಆತ ಸನ್ಮಾರ್ಗದಲ್ಲಿ ನೆಲಸಿದ್ದ. ಅವನ 53 ಭಾಷಣಗಳು ಉಪಲಬ್ಧವಾಗಿವೆ. ಅವುಗಳಲ್ಲಿ ಆರು ವಿಶೇಷ ಕುತೂಹಲ ಕೆರಳಿಸುತ್ತವೆ. ತನಗೆ ಅಂಟಿದ ನಿತ್ಯವ್ಯಾಧಿಯನ್ನು ವಿವರಿಸಿ, ಅಸ್‍ಕ್ಲಿಪಿಯಸ್ ಹೇಗೆ ಸ್ವಪ್ನದಲ್ಲಿ ಅವತರಿಸಿ ಚಿಕಿತ್ಸೆ ಸೂಚಿಸಿದನೆಂಬುದನ್ನೂ ತಾನು ದೇವಸ್ಥಾನಗ ಳಲ್ಲಿ ತಂಗಿದ್ದನ್ನೂ ವರದಿಮಾಡಿದ್ದಾನೆ. ಅನೇಕ ರೋಗಿಗಳು ಅವನ ಲೇಖನದಿಂದ ಉಪಕೃತರಾದರು. ಆತ ವಾಗ್ಮಿ ವಿದ್ಯೆಯನ್ನು ಸಮರ್ಥಿಸಿಯೂ ಬರೆದಿದ್ದಾನೆ.

ಫ್ರಂಟೊ (ಸು. 100-175) ನ್ಯೂಮಿಡಿಯದಿಂದ ರೋಮಿಗೆ ಬಂದು, ಬೋಧಕನಾಗಿ ವಾಗ್ಮಿಯಾಗಿ ಖ್ಯಾತಿಗೊಂಡು, ಚಕ್ರವರ್ತಿಯ ಆಶ್ರಯ ಸಂಪಾದಿಸಿ, ಆತನ ದತ್ತು ಪುತ್ರರಿಗೆ ಬೋಧಕನಾಗಿದ್ದ. ಅವನು ಬರೆದ “ಕುಶಲಪತ್ರ”ಗಳಿಂದಲೂ ಅವನ ಇನ್ನೊಬ್ಬ ಶಿಷ್ಯ ಆಲಸ್ ಜಿಲ್ಲಿಯಸ್ಸನ “ಅಟ್ಟಿಕ್ ರಾತ್ರಿಗಳು”-ಎಂಬ ಕೃತಿಯಿಂದಲೂ ಫ್ರಂಟೋವಿನ ಆಲೋಚನೆಗಳನ್ನು ಊಹಿಸಬಹುದು. ಕ್ವಿಂಟಿಲಿಯನ್ ಶಿಫಾರಸು ಮಾಡಿದ ಶಿಷ್ಟತೆ ಫ್ರಂಟೋವಿಗೆ ಶೈತ್ಯತಾಕಿ ಜಡವಾದಂತೆ ತೋರಿಬಂತು. ಸಿಸಿರೊವಿಗೂ ಹಿಂದಕ್ಕೆ ಹೋಗಿ ಪ್ರಾಚೀನರ ಶಬ್ದಕೋಶವನ್ನು ಪುನರು ತ್ಥಾಪಿಸಬೇಕೆಂದು ಅವನ ಗಾಢ ಸಲಹೆ. ಹಾಗೆ ಮಾಡಿದರೆ ಹಚ್ಚಹೊಸ ವಾಗ್ಝರಿ ಫಲಿಸುತ್ತದೆಂದು ಹೇಳಿದ. ಅತ್ಯಂತ ಹಳೆಯದಾದ್ದರಿಂದ ನಾವೀನ್ಯ ಹುಟ್ಟುತ್ತದೆ ಎಂಬ ಅವನ ಪ್ರಾಚೀನತೆಯ ಮೋಹ ವಿಚಿತ್ರ ವಾಗಿತ್ತು. ಅವನ ವಾದದ ಸಾರಾಂಶವಿದು: ಕವಿಗಾಗಲಿ, ವಾಗ್ಮಿಗಾಗಲಿ ಬಿಡಿ ಪದಗಳೇ ಆಧಾರ. ರೋಮನರ ಆದ್ಯ ಲೇಖಕರಲ್ಲದೆ ಮತ್ತೆಲ್ಲಿ ದೊರೆತಾವು ಅತ್ಯುತ್ಕøಷ್ಟ ಪದಸಮೂಹ? ಕೇಟೊ, ಸ್ಯಾಲಸ್ಟ್, ಪ್ಲಾಟಸ್, ಎನ್ನಿಯಸ್ ಮೊದಲಾದವರಿಂದ ಪದಗಳನ್ನು ಆಯ್ದುಕೊಂಡು ಮುಬ್ಬು ಅರ್ಥದವನ್ನು ದೂರೆಸೆದು, ಜನರಿಗೆ ಗೊತ್ತಿಲ್ಲದಿದ್ದರೂ ಅವರಿಗೆ ಕಲಿಸಿಕೊಡಬೇಕಾದವುಗಳನ್ನು ಬಳಸತಕ್ಕದ್ದು. ವರ್ಜಿಲ್ ಎಷ್ಟು ಜಾಗರೂ ಕನಾಗಿದ್ದ ನುಡಿಗಳ ವಿಚಾರದಲ್ಲಿ? ಸಿಸಿರೊವನ್ನೂ ಲಕ್ಷಿಸಿ. ಜನರ ಆಡುನುಡಿಯಲ್ಲಿ ಅನೇಕ ಅತಿಪ್ರಾಚೀನ ಶಬ್ದಗಳಿವೆ. ಜೀವಂತ ವಾಗಿವೆ. ಬರೆಹಗಾರ ಯಾವ ತೊಳಸು ಬಳಸಿಗೂ ಈಡಾಗದೆ, ಕರ ಚಮತ್ಕಾರದ ಪ್ರದರ್ಶನಕ್ಕೂ ಹೋಗದೆ, ಅಧಿಕೃತ ಮನ್ನಣೆಯನ್ನು ಪಡೆದಿರುವ ಪದಗಳನ್ನು ಅರ್ಥವತ್ತಾಗಿ ಉಪಯೋಗಿಸತಕ್ಕದ್ದು-ಎಂದಿದ್ದಾನೆ.

ಲ್ಯೂಸಿಯನ್ (125-192) ಬಹುಮುಖ ಶಕ್ತಿಯ ವಿಡಂಬನಕಾರ. ಪರಿಹಾಸ ಸಂವಾದ (ಸೆಟೈರಿಕ್ ಡೈಲಾಗ್) ಸ್ಥಾಪಿಸಿ ಒಳ್ಳೆಯ ಸಾಹಿತ್ಯ ಪ್ರಕಾರವನ್ನಾಗಿಸಿದ. “ಆಕ್ಷೇಪ ದ್ವಯ”ಎಂಬ ಕೃತಿಯಲ್ಲಿ ತನಗೆ 40 ತುಂಬಿದಾಗ ತಾನು ಹೇಗೆ ಭಾಷಣ ವಿದ್ಯೆಯನ್ನು ತ್ಯಜಿಸಿ ಸಂವಾದಕ್ಕೆ ತಿರುಗಿದೆನೆಂಬುದನ್ನು ವಿವರಿಸಿದ್ದಾನೆ. “ವಾಗ್ಮಿತೆಯ ಅಧ್ಯಾಪಕ” ಎಂಬ ಸಂವಾದದಲ್ಲಿ “ಕಿರಿದೂ ಕಷ್ಟದಿಂದ ಹತ್ತಬೇಕಾದ್ದೂ ಆದ ಡೆಮಾಸ್ತ ನೀಸ್ ಪ್ಲೇಟೋಗಳ ಪಥವೇತಕ್ಕೆ? ಸುಲಭಮಾರ್ಗವೊಂದಿದೆ, ಅದಕ್ಕೆ ಅಗತ್ಯವಾದದ್ದು ಅಜ್ಞಾನ ಯಮಧೈರ್ಯ, ನಿರ್ಲಜ್ಜೆ, ಭಾರಿ ಗಂಟಲು, ಡೌಲಿನ ಉಡುಪು, ವಯ್ಯಾರ ನಡಿಗೆ-ಎಂದು ಅಣಕಗೈದಿದ್ದಾನೆ.

“ಚರಿತ್ರೆ ಬರೆಯುವುದು ಹೇಗೆ” ಎಂಬುದು ಅವನ ಇನ್ನೊಂದು ಮುಖ್ಯ ಕೃತಿ. 165ರಲ್ಲಿ ಅರ್ಮೀನಿಯ ಯುದ್ಧ ಮುಗಿದ ಕೂಡಲೆ ಹಲವು ಚರಿತ್ರೆಗಳು ಹೊರಬಂದುವು. ಅವುಗಳಿಂದ ಬೇಸರಗೊಂಡು ಅವನ ಯುಕ್ತ ಕ್ರಮವನ್ನು ಮನವೊಪ್ಪಿಸುವಂತೆ ವಿವರಿಸಿದ. “ಚರಿತ್ರೆ ಹೊಗಳು ಮಾತಿನ ಸರಣಿಯಲ್ಲ; ಅದಕ್ಕೆ ಸತ್ಯ ಮೊದಲನೆಯ ಲಕ್ಷಣ. ಮೆಚ್ಚಿಕೆ ನಿಂದೆಗಳನ್ನು ಸಮಂಜಸವಾಗಿ ಮಿತವರಿತು ವಿನಿಯೋಗಿಸಬೇಕು. ವಿಚಾರಗಳಿಗೆ ಯುಕ್ತ ಪ್ರಮಾಣದಲ್ಲಿ ಗಮನ ಕೊಡತಕ್ಕದ್ದು. ಇತಿಹಾಸ ಕಾರನಿಗೆ ರಾಜನೀತಿಯ ಅರಿವು ಸಾಕಷ್ಟು ಇರಬೇಕು; ಕಥನಗಾರಿಕೆಯೂ ಅತ್ಯಗತ್ಯ, ನಿಷ್ಪಕ್ಷಪಾತವಾಗಿ ಯಥಾರ್ಥವನ್ನು ಪ್ರತಿಬಿಂಬಿಸಬೇಕು. ಶೈಲಿ ನೆಲದ ಮೇಲೆಯೇ ಹೆಜ್ಜೆಯಿಡುತ್ತ ಅವಶ್ಯಕವಾದಾಗ ಎತ್ತರಕ್ಕೆ ಏರತಕ್ಕದ್ದು-ಎಂದು ಅಭಿಪ್ರಾಯ ಪಟ್ಟಿದ್ದಾನೆ. ಶುಷ್ಕ ವೈಯಾಕರಣಿ, ಪದಲಂಪಟರು ಮುಂತಾದವರನ್ನೂ ಅವಹೇಳನಗೈದಿದ್ದಾನೆ. 

ಲ್ಯೂಸಿಯಸ್‍ಗಿಂತ ಕೊಂಚ ಚಿಕ್ಕವನಾದ ಹರ್ಮೊಜೀನಿಸ್ ಪ್ರಚಂಡ ವಾಗ್ಮಿಯಾಗಿದ್ದ. ಅವನ ಭಾಷಣ ಕೇಳುವುದಕ್ಕೆ ಚಕ್ರವರ್ತಿ ಮಾರ್ಕಸ್ ಆರಿಲಿಯಸ್ ತಾನೇ ಟಾರ್ಸಸ್ಸಿಗೆ ಹೋಗುತ್ತಿದ್ದನಂತೆ. ಅವನು ಹಲವು ಪಠ್ಯಪುಸ್ತಕ ರಚಿಸಿದ. ಆದರೆ ಅವುಗಳಲ್ಲಿ ಎಲ್ಲ ವಿಚಾರವೂ ಚರ್ವಿತ ಚರ್ವಣ; ಹೊಸದಾದ್ದು ಏನೂ ಇಲ್ಲ; ಲವಲವಿಕೆ ಗೌಣ. ಕೂದಲೆಳೆ ಬಿಡಿಸಿದಂತೆ ಕೇವಲ ಗ್ರಾಂಥಿಕ ವ್ಯತ್ಯಾಸಗಳನ್ನು ಪಟ್ಟಿಮಾಡಿ ವಾಗ್ವಿದ್ಯೆಗೆ ಅಂಟಿಕೊಂಡಿರುವ ಅತಿರೇಕಗಳಿಗೆ ನೀರೆರೆದು ಪೋಷಿಸಿ ಕುಪ್ರಖ್ಯಾತಿ ಪಡೆದ. ಅವನ ಹಿಂಬಾಲಕರೂ ವ್ಯಾಖ್ಯಾನಿಗಳೂ ಅವನ ಮಾರ್ಗವನ್ನೇ ಅನುಸರಿಸಿದರು.

ಮೂರು ನಾಲ್ಕು ಐದನೆಯ ಶತಮಾನ: ಫಿಲೋಸ್ಟ್ರಾಟಸ್ (ಸು. 172-245) ಎಂಬ ಹೆಸರಿನ ನಾಲ್ವರಲ್ಲಿ ಸೊಫಿಸ್ಟರ ಜೀವನ ಚಿರಿತ್ರೆ ಮತ್ತು ಅಪೊಲೋನಿಯಸ್ಸನ ಜೀವನಚರಿತ್ರೆಗಳನ್ನು ರಚಿಸಿದ ಫಿಲೊ ಸ್ಟ್ರಾಟಸ್ ಮುಖ್ಯನಾದವರು. ಅವನ ಮೊದಲನೆಯ ಪುಸ್ತಕದಲ್ಲಿ ಸೊಫಿಸ್ಟರ ಮತ್ತು ವಾಗ್ಮಿಗಳ ವಿಚಾರವಾಗಿ ಹೇರಳ ಸಂಗತಿಗಳು ತಿಳಿಯಬರುತ್ತವೆ. ಎರಡನೆಯ ಪುಸ್ತಕದಲ್ಲಿ ಲಕ್ಷಿಸಬೇಕಾದ ಅಂಶಗಳು ಬಲು ಕಡಿಮೆಯೆನ್ನ ಬಹುದು.

ಪೋಟಿನಸ್ 244ರಲ್ಲಿ ರೋಮಿಗೆ ಬಂದು ನೆಲೆನಿಂತ. ಅವನಲ್ಲಿ ಆಧ್ಯಾತ್ಮಿಕತೆಯೇ ಅಲ್ಲದೆ ಅತೀಂದ್ರಿಯ ರಹಸ್ಯದ ವಾಂಛಲ್ಯವೂ ತುಂಬಿತ್ತು. ಕಲೆಯ ವಿಚಾರವಾಗಿ ಆತ ಯಾವ ಕ್ರಮಬದ್ಧ ಸಿದ್ಧಾಂತವನ್ನೂ ಹೇಳಲಿಲ್ಲ. ಅವನ ಅಭಿಪ್ರಾಯವನ್ನು ಅಲ್ಲಿ ಇಲ್ಲಿ ಬರುವ ವಚನಗಳಿಂದ ಎಳೆದು ಕೊಳ್ಳಬೇಕು. ಕಲೆ ಎಂದರೆ ಅವನ ಅರ್ಥದಂತೆ ಆಕೃತಿಶಿಲ್ಪಕಲೆ ಮತ್ತು ಸಂಗೀತ. ಸಾಹಿತ್ಯದ ವಿಚಾರವಾಗಿ ಸ್ಪಷ್ಟೋಕ್ತಿ ಆಡದಿದ್ದರೂ ಅವನ ಇಂಗಿತ ಸುವ್ಯಕ್ತ. ಮೊದಮೊದಲು ಬರೆದ ಪ್ರಬಂಧಗಳಲ್ಲಿ ಪ್ಲೇಟೊವಿನ ಅನುಕರಣ ಸಿದ್ದಾಂತವನ್ನು ಒರಟಾಗಿಯೇ ತೆಗೆದುಕೊಂಡ. “ಪ್ರಕೃತಿಯ ಹಿಂದೆ ಕಲೆ ಅನುಕರಿಸುತ್ತ ಬರುತ್ತದೆ. ಮಸಕಾದ ದುರ್ಬಲ ಪ್ರತಿಬಿಂಬಗಳೇ ಕಲೆಯ ತಯಾರಿಕೆ; ಅವು ಆಟದ ಸಾಮಾನುಗಳಂತೆ ಬೆಲೆಯಿಲ್ಲದವು. ಎಂದು ಹೇಳಿದ. ಆಮೇಲೆ ತನ್ನ ಹೇಳಿಕೆಯನ್ನು ಮಾರ್ಪಾಟುಗೊಳಿಸಿದ”. ಯಥಾರ್ಥ ಪ್ರಪಂಚದ ಅನುಕರಣೆಯಲ್ಲದೆ ಕೆಲಸವನ್ನೂ ಕಲೆಗಾರ ನೆರವೇರಿಸಬಲ್ಲ. ಅದೊ ಇದೊ ಜೀವಂತ ವಸ್ತುವಿನ ಹೊಂದಾಣಿಕೆಯನ್ನು ಲಕ್ಷಿಸುವಿಕೆ ಎಲ್ಲ ವಸ್ತುಗಳಲ್ಲಿರುವು ದನ್ನೂ ಲಕ್ಷಿಸುವಂತಾದರೆ ಅದು ಆಧ್ಯಾತ್ಮಿಕ ಪ್ರಪಂಚವನ್ನು ಧ್ಯಾನಿಸುವ ಬುದ್ಧಿವಿವೇಕಕ್ಕೆ ಘಟಕಾಂಶವಾಗುತ್ತದೆ. ಹಾಗೆ ನಿರ್ಮಿಸಿದ ಕಲಾಕೃತಿಗಳು ಪ್ರಕೃತಿಯ ಪದಾರ್ಥಗಳೆಂತೆಯೇ. ವರ್ಣಚಿತ್ರ, ನೀರಿನಲ್ಲೊ ಕನ್ನಡಿಯಲ್ಲೊ ಪ್ರತಿಫಲಿಸುವ ಪ್ರತಿಬಿಂಬವಲ್ಲ; ಅದಕ್ಕೆ ತನ್ನದೇ ಆದ ಅಸ್ತಿತ್ವವಿದೆ. ಕಲ್ಲಿನ ಪ್ರತಿಮೆ ಯಾವುದರ ಅನುಕರಣವೂ ಅಲ್ಲ; ಆ ಆಕೃತಿ ಕಲ್ಲಿಗೆ ಇರಲಿಲ್ಲ. ಕಲಾವಿದನ ಆಂತರ್ಯದಲ್ಲಿ ಇದ್ದುದ್ದು ಕಲ್ಲಿಗೆ ವರ್ಗಾವಣೆ ಹೊಂದಿತು. ಅದರ ಸೌಂದರ್ಯ ಜಡವಸ್ತುಗಳ ಸೌಂದರ್ಯ ಮಿಗಿಲಾದದ್ದು. ಪ್ರಕೃತಿಯ ಪದಾರ್ಥಗಳಲ್ಲಿ ಅರೆಕೊರೆ ಇದ್ದೇ ಇರುತ್ತದೆ. ಕಲಾವಿದನ ಕೃತಿಗಳಲ್ಲಿ ಅವು ಭರ್ತಿಗೊಂಡು ಪೂರ್ಣತೆ ಪಡೆಯುತ್ತವೆ. ಏತಕ್ಕೆಂದರೆ ಕಲೆಗಾರ ಉದಾತ್ತ ಪ್ರಪಂಚವನ್ನು ಧ್ಯಾನಿಸಿಕೊಂಡು ಪ್ರತಿಮೆಯನ್ನೊ ಚಿತ್ರವನ್ನೊ ಸೃಷ್ಟಿಸುತ್ತಾನೆ-ಎಂದು ಅಭಿಪ್ರಾಯ ಪಟ್ಟಿದ್ದಾನೆ. ಪ್ಲೇಟೊ ಅರಿಸ್ಟಾಟಲರ ಸಿದ್ಧಾಂತಕ್ಕೆ ಆವಶ್ಯಕವಾದ ಅನುಬಂಧವನ್ನು ಪ್ಲೋಟಿನಸ್ ತಂದುಕೊಟ್ಟನೆನ್ನಬಹುದು. ಅಲ್ಲಿಂದ ಮುಂದೆ ವ್ಯಾಖ್ಯಾನಕಾರರೂ ಕೋಶಲೇಖಕರೂ ವೈಯಾಕರಣಿಗಳೂ ಉಪಾಖ್ಯಾನದವರೂ ಹುಟ್ಟಿಬಂದರೇ ಹೊರತು ವಿಮರ್ಶಕರಾರೂ ಉದಯಿಸಲಿಲ್ಲ.			
(ಎಸ್.ವಿ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ